ADVERTISEMENT

ಶ್ರೀಶೈಲ: 11ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮದ

ಸಮಸ್ಯೆಗಳ ಬಗ್ಗೆ ಚರ್ಚಿಸಲು ದೀಪೋತ್ಸವ ಸೂಕ್ತ ವೇದಿಕೆ: ಶ್ರೀಶೈಲ ಶ್ರೀ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 16:23 IST
Last Updated 15 ಡಿಸೆಂಬರ್ 2022, 16:23 IST
ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಗದಗನ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ 11ನೇ ವರ್ಷದ ಲಕ್ಷ ದೀಪೋತ್ಸವದಲ್ಲಿ ಶ್ರೀಶೈಲದ ಚನ್ನಸಿದ್ದರಾಮ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು
ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಗದಗನ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ 11ನೇ ವರ್ಷದ ಲಕ್ಷ ದೀಪೋತ್ಸವದಲ್ಲಿ ಶ್ರೀಶೈಲದ ಚನ್ನಸಿದ್ದರಾಮ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು   

ಯಾದಗಿರಿ: ಶ್ರೀಶೈಲಂದಲ್ಲಿ ನಡೆಯುವ ದೀಪೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಾಗದೆ, ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೂಕ್ತ ವೇದಿಕೆ ಕಲ್ಪಿಸಿದಂತಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಗದಗನ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ 11ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಪೀಠಕ್ಕೆ 10 ಎಕರೆ ಜಮೀನು ಮಂಜೂರು ಮಾಡಿ, ಆರಂಭಿಕ ಹಂತವಾಗಿ ಮಲ್ಲಮ್ಮನ ದೇವಸ್ಥಾನ ಎದುರುಗಡೆ 5 ಎಕರೆ ಜಮೀನು ಗುರುತಿಸಲಾಗಿದೆ. ಬರುವ ಜನವರಿ ತಿಂಗಳಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಸತಿ ಸಹಿತ ಗುರುಕುಲ ಶಾಲೆ, ಯಾತ್ರಿ ನಿವಾಸ, ಆಸ್ಪತ್ರೆ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ADVERTISEMENT

15ನೇ ಶತಮಾನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲಂನ ಅಂದಿನ ಜಗದ್ಗುರುಗಳಾದ ಈಶ್ವರ ಪಂಡಿತಾರಾಧ್ಯರಿಂದ ದೀಕ್ಷೆ ಪಡೆದು, ದೈನಂದಿನ ಕುಟುಂಬದೊಂದಿಗೆ ದಿನಾಲೂ ಲಿಂಗ ಪೂಜೆ ಮಾಡಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿ, ಮಲ್ಲಿಕಾರ್ಜುನ ಕೃಪೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.

ಮಾಜಿ ಶಾಸಕ ಜಿ.ಎಸ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಿಗ ಭಕ್ತರು ಇಲ್ಲಿ ಮಲ್ಲಮ್ಮಳ ದೇವಸ್ಥಾನ ನಿರ್ಮಾಣ ಮಾಡಿರುವುದರಿಂದ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜನರಲ್ಲಿ ಸಾಮರಸ್ಯ ಮೂಡಿದೆ. ನಮ್ಮ ಸಮಾಜದ ಯುವಕರು ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಎದುರಿಸುತ್ತಿರುವ ಮೀಸಲಾತಿ ಕುರಿತು ಜಗದ್ಗುರುಗಳು, ಎಲ್ಲಾ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ಪರಿಹಾರಕ್ಕೆ ಯತ್ನಿಸುತ್ತೇವೆ ಎಂದು ತಿಳಿಸಿದರು.

ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ಚಟುವಟಿಕೆ ವಿವರಿಸಿದರು.

ಸಮಾರಂಭದಲ್ಲಿ ಶ್ರೀಗಳಾದ ಬಸವರಾಜ ಸ್ವಾಮಿ ಅಬ್ಬಿಗೇರೆ, ಜೈನಾಪುರ ಶ್ರೀಗಳು, ಅಂಬಿಕಾನಗರ ಶ್ರೀಗಳು, ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯ ಸ್ವಾಮಿ, ಓಂಕಾರಯ್ಯಸ್ವಾಮಿ, ನರಗುಂದದ ಮಾಜಿ ಶಾಸಕ ಬಿ.ಆರ್.ಯಾವಗಲ್, ರೇವಣಸಿದ್ದಪ್ಪ ಕಡೂರ, ಅಪ್ಪಣ್ಣ ಕುರ್ತಕೋಟಿ, ಶಂಕರಗೌಡ ಯಾಳವರ, ಬಾಲರೆಡ್ಡಿ ವಿಜಯಪುರ, ಮಂಜುನಾಥರೆಡ್ಡಿ ಗದಗ, ಮಾಣಿಕರೆಡ್ಡಿ ಕುರಕುಂದಿ, ಭಾಸ್ಕರ್‌ರೆಡ್ಡಿ, ಮಹೇಶ, ಪ್ರಭು ಶಿರೂರ, ಪವಿತ್ರಾ ರೆಡ್ಡಿ ಇದ್ದರು.

ಲಿಂಗಾರೆಡ್ಡಿ ಆಲೂರ ನಿರೂಪಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಎಲ್ಲಾ ಭಾಗದ ಎಲ್ಲಾ ಜಿಲ್ಲೆಗಳ ಭಕ್ತರು ಉಪಸ್ಥಿತರಿದ್ದರು.

***

ಈ ಭರತ ಭೂಮಿಯಲ್ಲಿಯೇ ಶ್ರೀಶೈಲಂ ಕ್ಷೇತ್ರದಲ್ಲಿ ಹಲವು ವೈಶಿಷ್ಟ್ಯಗಳನ್ನು ಕಾಣಬಹುದು. ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅವರಿಗಾಗಿ ಇಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪೀಠವು ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದೆ

ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ, ಶ್ರೀಶೈಲಂ ಪೀಠದ ಜಗದ್ಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.