ADVERTISEMENT

ಕೋಲಿ ಬದಲು ಪರ್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಂತೆ ಒತ್ತಾಯ: ಡಿ.20ರಂದು ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:05 IST
Last Updated 17 ಡಿಸೆಂಬರ್ 2025, 7:05 IST
   

ಯಾದಗಿರಿ: ‘ಕೋಲಿ, ಕಬ್ಬಲಿಗ, ಅಂಬಿಗ ಸೇರಿದಂತೆ ಇತರೆ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡದ ತರುವ ಸಂಬಂಧ ಬೆಂಗಳೂರಲ್ಲಿ ಡಿಸೆಂಬರ್ 20ರಂದು ಸಮಾವೇಶ ನಡೆಸಲಾಗುವುದು’ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ ಹೇಳಿದರು.

‘ಬೆಂಗಳೂರಿನ ಆನಂದರಾವ್ ವೃತ್ತದ ಸಮೀಪದ ಕೆಇಬಿ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ ಸಭಾಂಗಣದಲ್ಲಿ ಈ ಸಮಾವೇಶ ನಡೆಯಲಿದೆ. ಸಮಾವೇಶಕ್ಕೂ ಮುನ್ನ ಡಿ.20ರಂದು ರಾಷ್ಟ್ರೀಯ ಕಾರ್ಯಕಾರಣಿ ನಡೆಯಲಿದ್ದು, ಸಮಾಜದ ಸ್ವಾಮೀಜಿಗಳು, ಸಂಘಟನೆಯ ಪದಾದಿಕಾರಿಗಳು, ಸದಸ್ಯರು ಪಾಲ್ಗೊಳ್ಳುವರು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಸಮಾಜದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಮಾಜದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಯ ಅಧ್ಯಕ್ಷರು ಸೇರಿದಂತೆ ಹಲವರು ಭಾಗವಹಿಸುವರು. ಪಕ್ಷಾತೀತವಾಗಿ ನಡೆಯುವ ಸಮಾವೇಶಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದರು. 

ADVERTISEMENT

‘ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತರ್, ಬಾರಿಕೆರ ಸೇರಿದಂತೆ ಇತರೆ ಪರ್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸುವಂತೆ ಹಲವು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ನಮ್ಮ ಸಮಾಜದವರು ಎಸ್‌ಸಿಯಲ್ಲಿದ್ದರೆ ಮತ್ತೆ ಕೆಲವೆಡೆ ಎಸ್‌ಟಿ ಪಟ್ಟಿಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಸೂಕ್ತ ದಾಖಲಾತಿಗಳ ಕೊರತೆಯ ಕಾರಣದಿಂದಾಗಿ ಕೋಲಿ, ಕಬ್ಬಲಿಗ, ಅಂಬಿಗ ಸೇರಿ ಪದಗಳು ಎಸ್‌ಟಿ ಪಟ್ಟಿಗೆ ಸೇರ್ಪಡೆಯಾಗಲಿಲ್ಲ. ಈಗ ಸೂಕ್ತ ದಾಖಲಾತಿಗಳು ಲಭ್ಯವಾಗಿವೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು. ಸಮಾಜದ ಬಹುದಿನಗಳ ಬೇಡಿಕೆಯಾದ ಎಸ್‌ಟಿ ಸೇರ್ಪಡೆಯ ಕಡತವನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಟೋಕ್ರಿ ಕೋಲಿ ಸಮಾಜದ ಬಿಟ್ಟು ಹೊದ ಪರ್ಯಾಯ ಪದಗಳನ್ನೂ ಸೇರ್ಪಡೆ ಮಾಡಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ, ರಾಜ್ಯ ಶಿಸ್ತು ಪಾಲನ ಸಮಿತಿಯ ಟಿ.ಡಿ. ರಾಜು, ಮುಖಂಡರಾದ ಡೋಡ್ಲಾ ಪಂಡ್ರಿ, ಮಲ್ಲೇಶಿ ಪಸಪೂಲ್, ಸಾಬರೆಡ್ಡಿ ಕಣೇಕಲ್, ಪವನ್ ಮುದ್ನಾಳ, ವೆಂಕಟೇಶ ಪದ್ದೇಪಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.