ADVERTISEMENT

ಗುರುಮಠಕಲ್: ಕೆಸರು ಗದ್ದೆಯಂತಾದ ರಾಜ್ಯ ಹೆದ್ದಾರಿ

ಗುರುಮಠಕಲ್ ಪಟ್ಟಣದಿಂದ ಗಾಜರಕೋಟವರೆಗಿನ ರಸ್ತೆಯಲ್ಲಿ ಸಂಚರಿಸಲು ಹರಸಾಹಸ

ಎಂ.ಪಿ.ಚಪೆಟ್ಲಾ
Published 23 ಸೆಪ್ಟೆಂಬರ್ 2020, 2:07 IST
Last Updated 23 ಸೆಪ್ಟೆಂಬರ್ 2020, 2:07 IST
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಹೊರವಲಯದಲ್ಲಿ ಪುಟಪಾಕ್‌–ಚಿತ್ತಾಪೂರ ರಾಜ್ಯ ಹೆದ್ದಾರಿ ಹದಗೆಟ್ಟಿರುವುದು
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಹೊರವಲಯದಲ್ಲಿ ಪುಟಪಾಕ್‌–ಚಿತ್ತಾಪೂರ ರಾಜ್ಯ ಹೆದ್ದಾರಿ ಹದಗೆಟ್ಟಿರುವುದು   

ಗುರುಮಠಕಲ್: ದೊಡ್ಡ ದೊಡ್ಡ ಗುಂಡಿಗಳು, ಗುಂಡಿಗಳಲ್ಲಿ ಮೊಳಕಾಲುದ್ದ ನೀರು, ಗುಂಡಿಗಳ ಸುತ್ತಲೂ ಹರಡಿಕೊಂಡಿರುವ ಜಲ್ಲಿಕಲ್ಲುಗಳು, ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಸಿಡಿಯುವ ಕೆಸರು ನೀರು, ವಾಹನಗಳಲ್ಲಿ ಕುಳಿತರೆ ಅಪಘಾತ ಸಂಭವಿಸುವ ಭಯ...

–ಇದು ಗುರುಮಠಕಲ್ ಪಟ್ಟಣದಿಂದ ಗಾಜರಕೋಟ ವರೆಗಿನ ರಾಜ್ಯ ಹೆದ್ದಾರಿಯ ಕಥೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಇದು ರಾಜ್ಯ ಹೆದ್ದಾರಿ! ಈ ಹೆದ್ದಾರಿಯಲ್ಲಿ ಸಂಚರಿಸಿದರೆ ಕೆಸರು ಗದ್ದೆಯಲ್ಲಿ ಸಂಚರಿಸಿದ ಅನುಭವ ಆಗುತ್ತದೆ ಎಂದು ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಾರೆ.

ಚಿತ್ತಾಪೂರ ನಗರದಿಂದ ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾಮದವರೆಗೆ ರಾಜ್ಯ ಹೆದ್ದಾರಿಯಾಗಿ ನಿರ್ಮಿಸಲು ಉದ್ದೇಶಿಸಿ ಅರೆಬರೆ ಕಾಮಗಾರಿ ಮಾಡಿದ ಪರಿಣಾಮ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಕಾರು ಮತ್ತಿತರ ಸಣ್ಣ ವಾಹನಗಳು ರಸ್ತಯ ಮಧ್ಯೆ ನಿರ್ಮಾ ಣವಾಗಿರುವ ಉಬ್ಬುಗಳಿಗೆ ತಗುಲುತ್ತವೆ.

ADVERTISEMENT

‘ರಸ್ತೆಯಲ್ಲಿ ವಾಹನವನ್ನು ಓಡಿಸುವುದಿರಲಿ ಜನರು ನಡೆದುಕೊಂಡು ಹೋಗುವುದೂ ಕಷ್ಟದ ಕೆಲಸವಾಗಿದೆ. ಹೀಗೆ ಸರ್ಕಸ್ ಮಾಡಿಸುವ ಬದಲು ಈ ರಸ್ತೆಯಲ್ಲಿ ಬರುವ ಗ್ರಾಮದಲ್ಲಿನ ಜನರಿಗೆ ಅಲ್ಲಲ್ಲಿ ಮೀನು ಸಾಕಾಣಿಕೆ ಅಥವಾ ಕೃಷಿ ಕಾರ್ಯಕ್ಕೆ ರಸ್ತೆ ಬಿಟ್ಟುಕೊಡಲಿ’ ಎಂದು ಚಪೆಟ್ಲಾ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಲೋಕೋಪಯೋಗಿ ಇಲಾಖೆಯ ಅಧೀನದ ಈ ರಸ್ತೆಯ ನಿರ್ಮಾಣದ ಕಾಮಾಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಹಿಸಿಕೊಂಡಿದೆ. 2018ರಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು, ಕೇವಲ ಎರಡು ವರ್ಷಗಳ ಅವಧಿಯಲ್ಲಿ ಗುರುಮಠಕಲ್ ಪಟ್ಟಣದಿಂದ ಗಾಜರಕೋಟ ವರೆಗಿನ 11 ಕಿ.ಮೀ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಗುಂಡಿಗಳು ಬಿದ್ದು ಕೆಸರುಗದ್ದೆಯಂತಾಗಿದೆ’ ಎಂದು ಚಪೆಟ್ಲಾ ಗ್ರಾಮದ ಮಹಾದೇವಪ್ಪ ಬಿ. ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆಯ ಕಾಮಗಾರಿ ಮೊದಲ ಹಂತ ಮಾತ್ರ ಮುಗಿದಿದ್ದು, ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಇನ್ನೂ ಎರಡನೇ ಹಂತದಲ್ಲಿ ರಸ್ತೆ ಕೆಲಸ ಪೂರ್ಣವಾಗಲಿದೆ. ಈಗ ಇರುವ ಮೊದಲ ಪದರದ ಮೇಲೆ ಇನ್ನೊಂದು ಕೋಟ್ ಡಾಂಬರೀಕರಣ ಮಾಡಿದಾಗ ಕಾಮಗಾರಿ ಪೂರ್ಣಗೊಂಡಂತೆ. ಸದ್ಯ ಮಳೆ ಬರುತ್ತಿದೆ. ಮಳೆ ನಿಂತ ತಕ್ಷಣ ಗುಂಡಿಗಳನ್ನು ದುರಸ್ತಿಗೊಳಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.