ADVERTISEMENT

ವಿಧಿ ಆಟ ಅಂದ್ರೆ ಇದೆ ಇರಬೇಕು ನೋಡ್ರಿ..

ಸಿಡಿಲು ಬಡಿದು ಮೃತಪಟ್ಟ ಪವನ್ ವಾಲು ರಾಠೋಡ, ಗಾಯಾಳುಗಳ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

ಟಿ.ನಾಗೇಂದ್ರ
Published 14 ಮೇ 2022, 2:31 IST
Last Updated 14 ಮೇ 2022, 2:31 IST
ಶಹಾಪುರ ತಾಲ್ಲೂಕಿನ ಹೊಸಕೇರಾ ಮೇಲಿನ ತಾಂಡಾದಲ್ಲಿ ಸಿಡಿಲು ಬಡಿದು ಗಾಯಗೊಂಡಿರುವ ವ್ಯಕ್ತಿ ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಶಹಾಪುರ ತಾಲ್ಲೂಕಿನ ಹೊಸಕೇರಾ ಮೇಲಿನ ತಾಂಡಾದಲ್ಲಿ ಸಿಡಿಲು ಬಡಿದು ಗಾಯಗೊಂಡಿರುವ ವ್ಯಕ್ತಿ ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು   

ಹೊಸಕೇರಾ ಮೇಲಿನ ತಾಂಡಾ (ಶಹಾಪುರ): ಹೊಸ ಮನಿ ಕಟ್ಟಿ ಮುಗಿಸಿದೆ. ಐದಾರು ದಿನದಲ್ಲಿ ಮಕ್ಕಳ ಲಗ್ನ ಮಾಡಬೇಕು ಎಂಬ ಖುಷಿಯಲ್ಲಿ ನಮ್ ಬೀಗರ ಸಂಗಡ ಹೊಸ ಮನೆಯಲ್ಲಿ ಮಾತಾಡ್ತ ಕುಂತಾಗ ಕಣ್ಣು ತೆರೆದು ನೋಡುವುದರಲ್ಲಿ ಸಿಡಿಲು ಬಂದು ಅಪ್ಪಳಿಸಿ ಒಂದು ಜೀವ ಕಳೆದುಕೊಂಡು ಏಳು ಮಂದಿ ಗಾಯಗೊಂಡಿವಿ. ನನ್ನದಲ್ಲದ ತಪ್ಪಿಗಾಗಿ ಶಿಕ್ಷೆ ಅನುಭವಿಸುವಂತೆ ಆಯ್ತು. ವಿಧಿ ಆಟ ಅಂದ್ರೆ ಇದೆ ಇರಬೇಕು ನೋಡ್ರಿ...

ತಾಲ್ಲೂಕಿನ ಹೊಸಕೇರಾ ಮೇಲಿನ ತಾಂಡಾದಲ್ಲಿ ಗುರುವಾರ ಸಿಡಿಲಿನ ಅಘಾತದಿಂದ ಹೊರ ಬರದ ಭಾಷು ನಾಯಕ ಅವರ ಮಾತುಗಳಿವು.

ಭಾಷು ನಾಯಕ ಅವರ ಮಗ ರಾಮು ಅವರ ಮದುವೆ ಮೆ.25ಕ್ಕೆ ನಿಗದಿ ಆಗಿದೆ. ಮೊದಲು ಗೃಹ ಪ್ರವೇಶ ಮಾಡಿ ನಂತರ ಮದುವೆ ಮಾಡುವ ಆಲೋಚನೆಯಲ್ಲಿ ಇದ್ದರು. ಭಾಷು ನಾಯಕನ ಅಳಿಯ ಪವನ್(15) ಸಹ ಮಾವನ ಮನೆಗೆ ಆಗಮಿಸಿದ್ದರು. ಆದರೆ ಹೆಣವಾಗಿ ಬಿದ್ದಿರುವುದನ್ನು ನೋಡಿ ತಾಂಡಾದ ನಿವಾಸಿಗರು ಬೆಚ್ಚಿ ಬಿದ್ದಾರೆ. ದುರ್ಘಟನೆಯಲ್ಲಿ ನಾಲ್ಕು ಮಕ್ಕಳು, ಇಬ್ಬರು ಮಹಿಳೆಯರು, ಒಬ್ಬ ಯುವಕ ಸಿಡಿನ ಹೊಡೆತಕ್ಕೆ ಗಾಯಗೊಂಡಿದ್ದಾರೆ.

ADVERTISEMENT

ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರಲ್ಲಿ ದೇವಿಬಾಯಿ, ಸೋಮು, ತಿಮ್ಮಿಬಾಯಿ, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಾಂಡಾದ ನಿವಾಸಿ ಚಂದ್ರಶೇಖರ ಜಾದವ ಮಾಹಿತಿ ನೀಡಿದರು.

ಮನೆ ನಿರ್ಮಿಸಿದ್ದೆ. ಆದರೆ ಛಾವಣಿ ಹಾಕಿರಲಿಲ್ಲ. ಟಿನ್ ಶೆಡ್ ಹಾಕಿರುವೆ. ಗೃಹ ಪ್ರವೇಶಕ್ಕಾಗಿ ಕುಟುಂಬದ ಸದಸ್ಯರು ಹಾಗೂ ಬೀಗರನ್ನು ಕರೆಯಿಸಿಕೊಂಡು ಅದರಂತೆ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ಸಂಜೆ ಐದು ಗಂಟೆಯ ಸುಮಾರಿಗೆ ಜೋರಾಗಿ ಗಾಳಿ ಬೀಸ ತೊಡಗಿತು. ಅದರ ಜತೆಯಲ್ಲಿ ಮಳೆಯ ಜೊತೆಗೆ ಜೋರಾದ ಸಿಡಿಲಿನ ಸಪ್ಪಳ ಇತ್ತು. ತುಸು ಮಳೆ, ಗಾಳಿ ಹೆಚ್ಚಾದ ಕಾರಣ ಹೊಸ ಮನೆಯಲ್ಲಿ 8-10 ಜನ ಮಾತಾಡುತ್ತಾ ಕುಳಿತುಕೊಂಡಿದ್ದೇವು. ಕಿಟಿಕಿಯ ಬಳಿ ಮುದ್ನಾಳ ದೊಡ್ಡ ತಾಂಡಾದ ಪವನ್ ನಿಂತಿದ್ದ. ಕೊಲ್ಮಿಂಚು ಹೊಡೆದ ತಕ್ಷಣ ಜೋರಾದ ಸಿಡಿಲಿನ ಶಬ್ದ ಕೇಳಿಸಿತು. ಸಿಡಿಲು ಟಿನ್ ಶೆಡ್‌ಗೆ ಅಪ್ಪಳಿಸಿ ನಂತರ ಅದರ ಸಿಡಿಲಿನ ಚೂರುಗಳು ತಾಗಿದವು. ಆಗ ಮನೆಯಲ್ಲಿದ್ದ ನಮಗೆ ಕೈ, ಕಾಲು, ತಲೆ, ಬೆನ್ನಿಗೆ ವಿದ್ಯುತ್ ಶಾಕ್ ಕೊಟ್ಟಂತೆ ಆಗಿ. ಚೀರಾಟ ಮಾಡಿದೆವು ಎನ್ನುತ್ತಾರೆ ಸಿಡಿಲಿನ ಹೊಡೆತವನ್ನು ಅನುಭವಿಸಿದ ಭೀಮು ರಾಠೋಡ.

ನಮಗೆ ಸುಟ್ಟ ಗಾಯದಂತೆ ಆಗಿವೆ. ಕೈ, ಕಾಲು ಸರಿ ಆಗುತ್ತವೆ ಅಥವಾ ಇಲ್ಲಾ ಎಂಬ ಆತಂಕ ಶುರುವಾಗಿದೆ. ಮುಂದೇನು ಎಂಬ ಭೀತಿ ಆವರಿಸಿದೆ ಎಂದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಒಬ್ಬರು ದುಗುಡವನ್ನು ತೊಡಿಕೊಂಡರು.

ಮನವಿ: ಸಿಡಿಲು ಬಡಿದು ಮೃತಪಟ್ಟ ವಿದ್ಯಾರ್ಥಿ ಪವನ್ ವಾಲು ರಾಠೋಡ ಹಾಗೂ ಗಾಯಗೊಂಡವರಿಗೆ ಸರ್ಕಾರ ಚಿಕಿತ್ಸೆ ನೀಡಿ ಪರಿಹಾರ ನೀಡಬೇಕು. ತಾಂಡಾಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಎಂದು ಬಂಜಾರ ಸಮಾಜದ ಮುಖಂಡರಾದ ಮಾನಸಿಂಗ್ ಚವ್ಹಾಣ ಹಾಗೂ ಚಂದ್ರಶೇಖರ ಜಾಧವ
ಮನವಿ ಮಾಡಿದ್ದಾರೆ.

*ಕಂದಾಯ ಇಲಾಖೆ ಸಿಬ್ಬಂದಿ ತಾಂಡಾಕ್ಕೆ ಭೇಟ ನೀಡಿ ಪಂಚನಾಮೆ ವರದಿ ಸಿದ್ದಪಡಿಸಿ ಕೊಟ್ಟಿದ್ದಾರೆ. ಮೃತ ಬಾಲಕನಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಮೇಲಧಿಕಾರಿಗೆ ವರದಿ ನೀಡುವೆ

- ಮಧುರಾಜ ಕೂಡ್ಲಗಿ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.