ADVERTISEMENT

ವಸತಿ ನಿಲಯದಲ್ಲಿ ಸಮಸ್ಯೆ; ವಿದ್ಯಾರ್ಥಿಗಳ ಆಕ್ರೋಶ

ಗುರುಮಠಕಲ್‌: ವಾರ್ಡನ್ ನಾಗಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 6:00 IST
Last Updated 26 ಜನವರಿ 2023, 6:00 IST
ಗುರುಮಠಕಲ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಸಮಸ್ಯೆ ಕುರಿತು ತಾಲ್ಲೂಕು ಅಧಿಕಾಅರಿ ರಾಮಚಂದ್ರ ಅವರಿಗೆ ತಿಳಿಸಿದ ವಿದ್ಯಾರ್ಥಿಗಳು
ಗುರುಮಠಕಲ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಸಮಸ್ಯೆ ಕುರಿತು ತಾಲ್ಲೂಕು ಅಧಿಕಾಅರಿ ರಾಮಚಂದ್ರ ಅವರಿಗೆ ತಿಳಿಸಿದ ವಿದ್ಯಾರ್ಥಿಗಳು   

ಗುರುಮಠಕಲ್: ಮೆನುವಿನಲ್ಲಿದ್ದಂತೆ ಊಟ ಸಿಗುತ್ತಿಲ್ಲ, 100 ವಿದ್ಯಾರ್ಥಿಗಳಿಗೆ 30 ತಟ್ಟೆಗಳಲ್ಲೇ ಊಟ ನೀಡಲಾಗುತ್ತಿದೆ, ಆರ್.ಒ. ಪ್ಲಾಂಟ್ ಕೆಟ್ಟು ನಿಂತಿದೆ, ಶೌಚಾಲಯಗಳು ಮತ್ತು ಸ್ನಾನಗೃಹಗಳಲ್ಲಿ ದುರ್ವಾಸನೆ ಬೀರುತ್ತಿವೆ, ಬಿಸಿನೀರು ಸಿಗದು, ಗ್ರಂಥಾಲಯ ವ್ಯವಸ್ಥೆಯಿಲ್ಲ, ವಾರ್ಡನ್ ಹಾಸ್ಟಲ್‌ಗೆ ಬರುವುದೇ ಇಲ್ಲ. ಈ ಬಗ್ಗೆ ಮೇಲಧಿಕಾರಿಗೆ ತಿಳಿಸಿದರೂ ಸ್ಪಂಧಿಸುತ್ತಿಲ್ಲ ಎಂದು ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ (ಎಸ್ಸಿ) ವಿದ್ಯಾರ್ಥಿಗಳು ಆರೋಪಿಸಿದರು.

ಬುಧವಾರ ಬೆಳಿಗ್ಗೆ ವಿದ್ಯಾರ್ಥಿಗಳು ಹಾಸ್ಟೆಲ್ ಸಮಸ್ಯೆಗಳ ಕುರಿತು ಗೋರಸೇನಾ ಮತ್ತು ಜಯ ಕರ್ನಾಟಕ ಸಂಘಟನೆಗಳ ಕಾರ್ಯಕರ್ತರೊಂದಿಗೆ ತಾಲ್ಲೂಕು ಅಧಿಕಾರಿಗಳಿಗೆ ವಿವರಿಸಿದರು.

ವಾರ್ಡನ್‌ಗೆ ಅವರಿಗೆ ಮನವಿ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾ ದಿನ ದೂಡುತ್ತಾರೆ. ತಿಂಗಳಾದರೂ ಹಾಸ್ಟೆಲ್ ಕಡೆಗೆ ಬಂದಿಲ್ಲ. ವಾರ್ಡನ್ ಬದಲಿಸಿ ಎಂದು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ರಾಮಚಂದ್ರ ಅವರಿಗೆ ಆಗ್ರಹಿಸಿದರು.

ADVERTISEMENT

ಬೇರೆ ಅಧಿಕಾರಿಗೆ ಪ್ರಭಾರ ವಹಿಸಿದ್ದಾಗ ಸಮಸ್ಯೆಗಳಿರಲಿಲ್ಲ. ಪ್ರಭಾರ ಅಧಿಕಾರಿ ವಹಿಸಿಕೊಳ್ಳದಂತೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮವಹಿಸದಿರುವುದು ಏಕೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಗದ್ದಗಿ ಪ್ರಶ್ನಿಸಿದರು.

ವಾರ್ಡನ್ ನಾಗಪ್ಪ ಮೇಲೆ ಕ್ರಮ ತೆಗೆದುಕೊಂಡು ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಗೋರಸೇನಾ ಅಧ್ಯಕ್ಷ ಡಿ.ಕೆ.ರವಿ ಚಿನ್ನಾರಾಠೋಡ ಎಚ್ಚರಿಸಿದರು.

ಈಗಿನ ವಾರ್ಡನ್ ನಿಯೋಜಿತ ವಾರ್ಡನ್‌ಗೆ ಅಧಿಕಾರ ಹಸ್ತಾಂತರಿಸುತ್ತಿಲ್ಲ, ಸಮಸ್ಯೆಯನ್ನೂ ಪರಿಹರಿಸಲು ಮುಂದಾಗದ ಕಾರಣ ಅವರ ಮೇಲೆ ಕ್ರಮವಹಿಸುವಂತೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತೇವೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ತಾಲ್ಲೂಕು ಅಧಿಕಾರಿ ರಾಮಚಂದ್ರ ಭರವಸೆ ನೀಡಿದರು.

ಗೋಪಾಲಕೃಷ್ಣ ಮೇದಾ, ರಿಯಾಜ, ಅಯಾಜ, ಹಣಮೇಶ, ವೀರೇಶ, ಹಾಸ್ಟೆಲ್ ವಿದ್ಯಾರ್ಥಿಗಳಾದ ಪ್ರಕಾಶ, ಮೈಲಾರಲಿಂಗ, ರಾಅಹುಲ, ಕಿಶನ, ಧನರಾಜ, ಮಂಜು, ವೆಂಕಟೇಶ, ಗಣೇಶ, ಅನೀಲ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.