
ಸೈದಾಪುರ: ‘ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೂರಜ್ ಲ್ಯಾಬೋರೇಟರಿಸ್ ಕಂಪನಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಸ್ಫೋಟ ಸಂಭವಿಸಿದೆ. ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಿರ್ಲಕ್ಷ್ಯ ವಹಿಸಿದ ಕೆಮಿಕಲ್ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಕರವೇ ಕಾರ್ಯಕರ್ತರು ಬುಧವಾರ ಪೋಲಿಸರಿಗೆ ದೂರು ನೀಡಿದ್ದಾರೆ.
‘ಸೂರಜ್ ಲ್ಯಾಬೋರೇಟರಿಸ್ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಕಂಪನಿಯಲ್ಲಿ ರಿಯಾಕ್ಟರ್ (ಎಸ್‌ಎಸ್‌ಆರ್) ಒಡೆದು ಬ್ಲಾಸ್ಟ್ ಆಗಿ ಸುಮಾರು ಎರಡು ಅಂತಸ್ತಿನ ಕಟ್ಟಡದ ಗೋಡೆಗಳು ಧ್ವಂಸಗೊಂಡಿವೆ. ದೃಶ್ಯಗಳನ್ನು ನೋಡಿದರೆ ಭಾರಿ ಅನಾಹುತ ಆಗಿದೆ ಎಂಬುದು ತಿಳಿಯುತ್ತದೆ. ಕೆಲಸ ಮಾಡುವ ಕಾರ್ಮಿಕರಿಗೆ ಗಾಯಗಳಾಗಿವೆ ಹಾಗೂ ಕೆಲವರಿಗೆ ಬೇರೆಬೇರೆ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ’ ಎಂದು ಕರವೇ ಮುಖಂಡರು ಆರೋಪಿಸಿದರು.
‘ಸೂರಜ್ ಲ್ಯಾಬೋರೇಟರಿಸ್ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಕಂಪನಿಯ ಮಾಲೀಕರು ಹಾಗೂ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಿ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಸಂಪೂರ್ಣ ವಿವರಗಳನ್ನು ಪೋಲಿಸ್ ಇಲಾಖೆ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ವಿಳಂಬ ಮಾಡಿದರೆ ಕರ್ನಾಟಕ ರಕ್ಷಣಾ ವೇದಿಕೆ ಸೈದಾಪುರ ಹೋಬಳಿ ಘಟಕದ ವತಿಯಿಂದ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೆಂಕಟರಾಮುಲು ಕೂಡ್ಲೂರು, ತಾಲ್ಲೂಕ ಸಂಘಟನೆ ಕಾರ್ಯದರ್ಶಿ ಬಸ್ಸು ನಾಯಕ್ ಸೈದಾಪುರ್, ಮಹೇಶ್ ಜೇಗರ್, ಮಲ್ಲು ಬಾಡಿಯಾಳ, ಅಂಜು ಬಾಗ್ಲಿ, ನರೇಶ್ ಬೈರಮಕೊಂಡ,ಮೌನೇಶ್ ಮಾಧ್ವಾರ, ದೇವಸಿಂಗ್ ಠಾಕೂರ್, ಸಾಗರ್ ಪಿ ಹುಲ್ಲೆರ್, ಸುರೇಶ ಬೆಳಗುಂದಿ,ರಮೇಶ್ ಮಾಧ್ವಾರ, ಅವಿನಾಶ ಕಲಾಲ್, ಸಂತೋಷ್ ಕೂಡ್ಲೂರು, ನಾಗೇಂದ್ರ ನಾಯಕ್ ಇದ್ದರು.
‘ಸ್ಫೋಟ ಅದರ ತೀವ್ರತೆ ಪರಿಣಾಮದ ಬಗ್ಗೆ ಪತ್ರಕೆಗಳಲ್ಲಿ ವರದಿ ಪ್ರಕಟವಾಗಿದೆ. ವಾಸ್ತವ ಹೀಗಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಾಖಾರ್ನೆಗಳು ಕೈಗಾರಿಕಾ ಸುರಕ್ಷೆ ಪೋಲಿಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿದರೆ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಆರೋಪಿಸಿದರು. ‘ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು ಸಹ ಪೊಲೀಸರಿಗೆ ಇಲಾಖೆಗೆ ದೂರು ನೀಡಿ ಯಾವುದೇ ರೀತಿ ಎಂಎಲ್‌ಸಿ ಮಾಡಿಲ್ಲ. ಕಂಪನಿಯವರು ‘ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಹೇಳಿಕೆ ನೀಡಿದ್ದು ಅನುಮಾನಾಸ್ಪದವಾಗಿದೆ. ಆದರೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನೀಡದೆ ಮುಚ್ಚಿ ಹಾಕುತ್ತಿದ್ದಾರೆ. ಸಾವು–ನೋವು ಆಗಿರುವ ಬಗ್ಗೆ ಶಂಕೆ ಇರುವುದರಿಂದ ತನಿಖೆ ಅಗತ್ಯ. ತಕ್ಷಣ ಸಂಬಂಧಪಟ್ಟವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಘಟನೆ ನಡೆದು ನಾಲ್ಕು ದಿನಗಳಾದರೂ ಪ್ರಕರಣ ದಾಖಲಿಸದೇ ಇರುವುದು ನಾಚಿಕೆಗೇಡು ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.