ಸುರಪುರ: ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆ ಅದ್ದೂರಿಯಾಗಿ ಜರುಗಿತು.
ಐದು ದಿನಗಳ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು. ಮೂರು ದಿನಗಳ ಉಚ್ಚಾಯಿ ಹಾಗೂ ಪುರವಂತರ ಮಹಾ ಸೇವಾ ಕಾರ್ಯಕ್ರಮ ಜರುಗಿದವು. ಕಳೆದ ಎರಡು ವಾರಗಳಿಂದ ನಿರಂತರವಾಗಿ ದಿನಾಲು ಸಂಜೆ ಶರಣಬಸವೇಶ್ವರರ ಪುರಾಣ ನಡೆಯಿತು.
ಶನಿವಾರ ದೇವರ ರಥೋತ್ಸವದ ಅಂಗವಾಗಿ ಬೆಳಿಗ್ಗೆ ಮಲ್ಲಿಕಾರ್ಜುನ ದೇವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ನಂತರ ರಥಕ್ಕೆ ಕಳಸಾರೋಹಣ ಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ತಿಂಥಣಿ ಕೈಲಾಸ ಕಟ್ಟಿಯ ಗೂಳಿ ಮೌನಯ್ಯ ತಾತಾ, ಪೇಠ ಅಮ್ಮಾಪುರ ರಾಮಲಿಂಗೇಶ್ವರ ಮಠದ ರಾಮ ಶರಣರು, ಹಾಲಭಾವಿ, ಅಮರಯ್ಯಸ್ವಾಮಿ, ಬಸಯ್ಯಸ್ವಾಮಿ ಮತ್ತು ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಜರುಗಿತು.
ಭಕ್ತರು ರಥಕ್ಕೆ ಹಣ್ಣು, ಕಬ್ಬು, ಉತ್ತತ್ತಿ ಎಸೆದು ಹರಕೆ ಸಲ್ಲಿಸಿದರು. ಪಟಾಕಿ ಬಾಣಗಳ ಸದ್ದು ಎಲ್ಲರಲ್ಲಿ ಹರ್ಷ ಮೂಡಿಸಿತು. ಮಕ್ಕಳು ಹಾಗೂ ಮಹಿಳೆಯರು ಬಳೆ,ಆಟದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.