ADVERTISEMENT

ಸುರಪುರ | ಶಾಂತಿ-ಸೌಹಾರ್ದವಾಗಿ ಬಕ್ರಿದ್ ಆಚರಿಸಿ: ಡಿವೈಎಸ್‍ಪಿ ಜಾವೇದ್ ಇನಾಂದಾರ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:23 IST
Last Updated 2 ಜೂನ್ 2025, 14:23 IST
ಸುರಪುರ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಬಕ್ರೀದ್ ಹಬ್ಬದ ಶಾಂತಿ ಸಭೆ ಜರುಗಿತು. ಡಿವೈಎಸ್‍ಪಿ ಜಾವೇದ್ ಇನಾಮದಾರ್, ಸಿಪಿಐ ಉಮೇಶ್ ಎಂ. ಸೇರಿ ಇತರಿದ್ದರು
ಸುರಪುರ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಬಕ್ರೀದ್ ಹಬ್ಬದ ಶಾಂತಿ ಸಭೆ ಜರುಗಿತು. ಡಿವೈಎಸ್‍ಪಿ ಜಾವೇದ್ ಇನಾಮದಾರ್, ಸಿಪಿಐ ಉಮೇಶ್ ಎಂ. ಸೇರಿ ಇತರಿದ್ದರು   

ಸುರಪುರ: ‘ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬ್ರಕೀದ್ ಹಬ್ಬವನ್ನು ಜೂನ್ 7ರಂದು ಶಾಂತಿ, ಸೌಹಾರ್ದಯುತವಾಗಿ ಆಚರಿಸಬೇಕು’ ಎಂದು ಡಿವೈಎಸ್‍ಪಿ ಜಾವೇದ್ ಇನಾಂದಾರ್ ಹೇಳಿದರು.

ಇಲ್ಲಿಯ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ಸುರಪುರ ತಾಲ್ಲೂಕು ಹಿಂದೂ-ಮುಸ್ಲಿಂಮರ ಭಾವೈಕ್ಯತೆಯ ನೆಲೆ ಬೀಡಾಗಿದೆ. ಇಲ್ಲಿ ಹಿಂದಿನಿಂದಲೂ ಪ್ರತಿಯೊಂದು ಧರ್ಮಗಳ ಹಬ್ಬಗಳು ಪ್ರೀತಿ, ವಿಶ್ವಾಸದೊಂದಿಗೆ ಶಾಂತಿ, ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿರುವುದು ಪ್ರಶಂಸನೀಯ’ ಎಂದರು.

ADVERTISEMENT

‘ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಇಲ್ಲಿ ಅನೇಕ ಜಾತಿ, ಧರ್ಮಗಳಿದ್ದು ಅವು ಶಾಂತಿಯ ಹೂದೋಟವಾಗಿವೆ. ನಾವೆಲ್ಲರೂ ಒಂದೇ ಭಾರತೀಯರು. ಹಬ್ಬ, ಹರಿದಿನಗಳನ್ನು ಶಾಂತ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಎಲ್ಲರೂ ಕಾನೂನು ಪರಿಪಾಲನೆ ಮಾಡಬೇಕು. ಬಲಿದಾನದ ನಿರುಪಯುಕ್ತ ವಸ್ತುವನ್ನು ಎಲ್ಲೆಂದರಲ್ಲಿ ಎಸೆಯ ಕೂಡದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ದನ, ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುವಂತಿಲ್ಲ’ ಎಂದರು.

ಮುಖಂಡರಾದ ಅಬ್ದುಲ್ ಸುಭಾನ್ ಸಾಬ್ ಡಕ್ಕನ್ ಹುಣಸಗಿ, ಅಹ್ಮದ್ ಪಠಾಣ, ಶಹಾಪುರದ ಸೈಯದ್ ಫಹೀಮ್ ಖಾದ್ರಿ ಸೇರಿ ಇನ್ನಿತರರು ಬಕ್ರೀದ್ ಹಬ್ಬದ ಮಹತ್ವ ಮತ್ತು ಆಚರಣೆ ಕುರಿತು ಮಾತನಾಡಿದರು.

ಸಿಪಿಐ ಉಮೇಶ್.ಎಂ, ವಿವಿಧ ಪೊಲೀಸ್ ಠಾಣೆಗಳ ಪಿಎಸ್‍ಐಗಳು, ಮುಖಂಡರಾದ ಅಬ್ದುಲ್ ಗಫಾರ್ ನಗನೂರಿ, ಶೇಖ್ ಮಹಿಬೂಬ್ ಒಂಟಿ, ನಾಸೀರ್ ಹುಸೇನ್ ಕುಂಡಾಲೆ, ಶಕೀಲ್ ಅಹ್ಮದ್ ಖುರೇಷಿ, ಮುಫ್ತಿ ಮೊಹ್ಮದ್ ಎಕ್ಬಾಲ್ ಒಂಟಿ, ಲಿಯಾಖತ್ ಹುಸೇನ್ ಉಸ್ತಾದ್, ಮೊಹ್ಮದ್ ಗೌಸ್ ಕಿಣ್ಣಿ ಸೇರಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.