ADVERTISEMENT

ಸುರಪುರದ ಗರುಡಾದ್ರಿ ಕಲೆಗೆ ಸಾಟಿಯಿಲ್ಲ: ಕಿರಣಕುಮಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:16 IST
Last Updated 11 ಜನವರಿ 2026, 6:16 IST
ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ‘ಸುರಪುರ ಪೇಟಿಂಗ್ ಕಲೆಯ ಬಗ್ಗೆ ಕ್ರಾಫ್ಟ್ ಸ್ಟಡಿ ರಿಪೋರ್ಟ್’ ಪುಸ್ತಕವನ್ನು ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಬಿಡುಗಡೆ ಮಾಡಿದರು 
ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ‘ಸುರಪುರ ಪೇಟಿಂಗ್ ಕಲೆಯ ಬಗ್ಗೆ ಕ್ರಾಫ್ಟ್ ಸ್ಟಡಿ ರಿಪೋರ್ಟ್’ ಪುಸ್ತಕವನ್ನು ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಬಿಡುಗಡೆ ಮಾಡಿದರು    

ಸುರಪುರ: ‘ವಿಶ್ವವಿಖ್ಯಾತಿ ಹೊಂದಿರುವ ಸುರಪುರ ಸಂಸ್ಥಾನದ ಗರುಡಾದ್ರಿ ಕಲೆಗೆ ಸಾಟಿ ಇಲ್ಲ. ಆಧುನಿಕ ಕಲೆಯ ಪ್ರಭುತ್ವದಿಂದ ನಶಿಸಿ ಹೋಗುತ್ತಿರುವ ಈ ಅನನ್ಯ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಧಾರವಾಡ ಕರಕುಶಲ ವಿಭಾಗದ ನಿರ್ದೇಶಕ ಕಿರಣಕುಮಾರ ಅಭಿಪ್ರಾಯಪಟ್ಟರು.

ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಸಹಯೋಗದಲ್ಲಿ ಧಾರವಾಡ ಕರಕುಶಲ ವಿಭಾಗ ಹಮ್ಮಿಕೊಂಡಿದ್ದ ‘ಸುರಪುರ ಪೇಟಿಂಗ್ ಕಲೆಯ ಬಗ್ಗೆ ಕ್ರಾಫ್ಟ್ ಸ್ಟಡಿ ರಿಪೋರ್ಟ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಭಾಗದ ಆಸಕ್ತ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೇಟಿಂಗ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಸಂಘ ಸಂಸ್ಥೆಯವರು ಮುಂದೆ ಬಂದಲ್ಲಿ ಅಥವಾ ಅರಸು ಮನೆತನದವರು ಆಸಕ್ತಿ ವಹಿಸಿದಲ್ಲಿ ಸುರಪುರದಲ್ಲಿಯೇ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದರು.

ADVERTISEMENT

ಅಂತರರಾಷ್ಟ್ರೀಯ ಕಲಾವಿದ ರಹೆಮಾನ ಪಟೇಲ ಮಾತನಾಡಿ, ‘ಸುರಪುರದ ಗರುಡಾದ್ರಿ ಚಿತ್ರಕಲೆ 300 ವರ್ಷಕ್ಕಿಂತ ಹೆಚ್ಚು ಇತಿಹಾಸ ಹೊಂದಿದೆ. ಈ ಕಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ದೇಶದ ಸಂಸತ ಭವನದಲ್ಲಿಯೂ ಅನಾವರಣಗೊಂಡಿದೆ. ಲಂಡನ್ ಮ್ಯೂಸಿಯಂನಲ್ಲಿಯೂ ಇದೆ. ಈ ಕಲೆ ಉಳಿಸಿ ಬೆಳೆಸಿದ ಕೀರ್ತಿ ಅಂತರರಾಷ್ಟ್ರೀಯ ಕಲಾವಿದ ವಿಜಯ ಹಾಗರಗುಂಡಗಿ ಅವರಿಗೆ ಸಲ್ಲುತ್ತದೆ’ ಎಂದರು.

‘ಇಲ್ಲಿಯ ಸಂಸ್ಥಾನದ ರಾಜಾಶ್ರಯ ಪಡೆದಿದ್ದ ಗರುಡಾದ್ರಿ ಕುಟುಂಬ ಈ ಕಲೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿತ್ತು. ಇದು ಅತ್ಯಂತ ನವಿರಾದ ಕಲೆಯಾಗಿದೆ’ ಎಂದು ತಿಳಿಸಿದರು.

ಕಲಾವಿದ ಜಗದೀಶ ಕಾಂಬ್ಳೆ, ಅಧ್ಯಕ್ಷತೆ ವಹಿಸಿದ್ದ ಶಾಂತಲಾ ನಿಷ್ಠಿ ಮಾತನಾಡಿದರು. ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಪುಸ್ತಕ ಬಿಡುಗಡೆಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಪ್ರಾಂಶುಪಾಲ ಶರಣಬಸಪ್ಪ ಸಾಲಿ, ಕಲಾವಿದ ಚಂದ್ರಶೇಖರ ವೇದಿಕೆಯಲ್ಲಿದ್ದರು.
ಕಲಾವಿದರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶರಣಬಸವ ಶಿಕ್ಷಣ ಸಂಸ್ಥೆಯ ಚಿತ್ರಕಲಾ ವಿಭಾಗವನ್ನು ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಉದ್ಘಾಟಿಸಿದರು. ಶಿವಕುಮಾರ ಮಸ್ಕಿ ಸ್ವಾಗತಿಸಿದರು. ಪ್ರಕಾಶ ಅಂಗಡಿ ನಿರೂಪಿಸಿದರು. ಜಾವೇದ ಹುಸೇನ್ ಜಮಾದಾರ ವಂದಿಸಿದರು. 

ದೆಹಲಿಯ ಕರಕುಶಲ ಮಂಡಳಿಯಿಂದ ಆಯ್ಕೆ

‘ದೇಶದ ಪ್ರತಿಷ್ಠಿತ ಸಂಸ್ಥಾನಗಳಿಂದ 19 ಕಲೆಗಳ ಮಾದರಿಗಳನ್ನು ದೆಹಲಿಯ ಕರ ಕುಶಲ ಮಂಡಳಿಯ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಸುರಪುರದ ಗರುಡಾದ್ರಿ ಚಿತ್ರಕಲೆ ಆಯ್ಕೆಯಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುರಪುರದ ಘನತೆ ಗೌರವ ಹೆಚ್ಚಾಗಿದೆ’ ಎಂದು ಕಿರಣಕುಮಾರ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.