ಸುರಪುರ: ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಸುರಪುರ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಮೇರು ದೊರೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದರು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ರುಕ್ಮಾಪುರದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ‘ಸುರಪುರ ಒಂದು ಪ್ರಾಚೀನ ಬೇಡರ ರಾಜ್ಯ’ ಅನುವಾದಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಜಯನಗರ ಸಾಮಾಜ್ಯ ಮತ್ತು ಸುರಪುರ ರಾಜ ಮನೆತನ ಅತ್ಯಂತ ಶ್ರೇಷ್ಠವಾಗಿವೆ. ಮಹಾ ಪರಾಕ್ರಮಿಗಳು, ವಿದ್ವಾಂಸರು, ಕಲಾ ಪೋಷಕರು ಹಾಗೂ ದಾನಿಗಳು ಆಗಿದ್ದ ಸುರಪುರ ಅರಸರ ಚರಿತ್ರೆ ರೋಚಕವಾದದ್ದು. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಸ್ಥಾನವಿದೆ’ ಎಂದರು.
ಈ ಪುಸ್ತಕದಲ್ಲಿ ಸುರಪುರ ಸಂಸ್ಥಾನದ ಭವ್ಯ ಇತಿಹಾಸವಿದೆ. ಕಲ್ಯಾಣ ಕರ್ನಾಟಕದ ಭವಿಷ್ಯದ ನಿರ್ಮಾಣಕ್ಕೂ, ಇತಿಹಾಸಕಾರರು ಹಾಗೂ ಸಂಶೋಧಕರಿಗೆ ನೆರವಾಗಲಿದೆ’ ಎಂದು ಹೇಳಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದಸಾರ್ವಜನಿಕ ಗ್ರಂಥಾ ಲಯ ಇಲಾಖೆ ನಿರ್ದೇಶಕ ಡಾ. ಸತೀಶ್‍ಕುಮಾರ ಹೊಸಮನಿ, ‘ಈ ಭಾಗದಲ್ಲಿ ಪ್ರತಿ ವರ್ಷ ಉತ್ತಮವಾದ ಕೃತಿಗಳು ಹೊರ ಬರುತ್ತಿರುವುದು ಪ್ರಶಂಸನೀಯ. ಇಲ್ಲಿನ ಕೃತಿಗಳನ್ನು ಪುಸ್ತಕ ಆಯ್ಕೆ ಸಮಿತಿಯಲ್ಲಿ ಪ್ರಸ್ತಾಪಿಸಿ ಪುಸ್ತಕ ಖರೀದಿಸುವ ಮೂಲಕ ಲೇಖಕರಿಗೆ ಪ್ರೋತ್ಸಾಹಿಸಲಾಗುವುದು’ ಎಂದು ಅವರು ಭರವಸೆನೀಡಿದರು.
ಸುಪ್ರೀಂಕೋರ್ಟ್ ವಕೀಲ ರಾಜಾ ವೆಂಕಟಪ್ಪ ನಾಯಕ, ಹೈಕೋರ್ಟ್ ವಕೀಲ ಜೆ.ಅಗಸ್ಟೀನ್, ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿ ಮಠ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಜಿ.ಟಿ.ಚಂದ್ರಶೇಖರಪ್ಪ ಮತ್ತು ಲೇಖಕ ರಂಗನಗೌಡ ಪಾಟೀಲ ಮಾತನಾಡಿದರು.
ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸಾನ್ನಿಧ್ಯ ಹಾಗೂಸಂಘದ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅರಸು ಮನೆತನದ ಡಾ. ರಾಜಾ ಕೃಷ್ಣಪ್ಪ ನಾಯಕ, ಡಿ.ಎನ್.ಅಕ್ಕಿ, ಬಸವರಾಜ ಜಮದ್ರಖಾನಿ, ಶ್ರೀಹರಿರಾವ ಆದೋನಿ, ಡಾ. ರಾಜಾ ವೆಂಕಪ್ಪನಾಯಕ ಇದ್ದರು.
ಪ್ರೊ. ಡೊಣ್ಣೇಗೌಡರ ವೆಂಕಣ್ಣ ಪುಸ್ತಕ ಪರಿಚಯ ಮಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.