
ಸೈದಾಪುರ: ರಾಜ್ಯಾದ್ಯಂತ ಕೈಗೊಂಡಿರುವ ಸ್ವದೇಶಿ ಜಾಗೃತಿ ಸೈಕಲ್ ಜಾಥಾಗೆ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಯುವಕರು ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಸ್ವದೇಶಿ ಜಾಗೃತಿ ಸೈಕಲ್ ಜಾಥಾ ಬೀದರ, ಕಲಬುರಗಿ, ಯಾದಗಿರಿ ಮೂಲಕ ಸೈದಾಪುರ ಪಟ್ಟಣಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಬಿಗ್ರೇಡಿಯರ್ ರವಿ ಮುನಿಸ್ವಾಮಿ ಮಾತನಾಡಿ, ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಜಾಥಾ ನಡೆಯುತ್ತಿದ್ದು ಯುವಜನತೆ ಕೈಜೋಡಿಸಬೇಕು, ನಮ್ಮ ನೆಲದಲ್ಲಿ ತಯಾರಾದ ಹಾಗೂ ನಮ್ಮವರು ಸಿದ್ಧಪಡಿಸಿದ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ಸಹಕಾರ ನೀಡಬೇಕಿದೆ ಎಂದರು.
ಸ್ವದೇಶಿ ಚಿಂತನೆಗಳು ಬೆಳೆದರೆ ಭಾರತೀಯ ಕಲೆಗಾರರು, ತಯಾರಕರು, ರೈತರು, ಸಣ್ಣ ಪಟ್ಟಣಗಳ ಹಾಗೂ ಗ್ರಾಮೀಣ ಭಾಗದ ಉದ್ಯಮಿಗಳು ಬೆಳೆಯುತ್ತಾರೆ, ಜೀವನೋಪಾಯ ಬಲಗೊಳ್ಳಲಿದೆ. ಸ್ಥಳೀಯ ಆರ್ಥಿಕತೆ ಸದೃಢಗೊಂಡು ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದರು.
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕದ ಪಾಲು ಮಹತ್ತರವಾಗಿದ್ದು ದೇಶದ ಜಿಡಿಪಿಯಲ್ಲಿ ರಾಜ್ಯದ ಕೊಡುಗೆ ಶೇ 8.7ರಷ್ಟು ಇದ್ದು ಅತ್ಯಧಿಕ ಮಟ್ಟವಾಗಿದೆ. ಸೇವೆ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಜಿಡಿಪಿ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ನೀಡಿವೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಯುವ ಮುಖಂಡ ರಾಜು ದೊರೆ, ಭೀಮಣ್ಣ ಮಡಿವಾಳಕರ್, ಸಿದ್ದು ಪೂಜಾರಿ, ಶಿವುಕುಮಾರ ಹೂಗಾರ್, ಕನ್ನಡಪರ ಹೋರಾಟಗಾರ ವಿರೇಶ ಸಜ್ಜನ್, ಬಸ್ಸು ನಾಯಕ್, ರವೀಂದ್ರ ಕಡೇಚೂರು, ಅಶೋಕ್ ಗಡದ್, ಮಣಿಕಂಠ ನಾಟೇಕರ್, ಮಲ್ಲು ಪೂಜಾರಿ, ಶಾಹಿದ್ ರಾಜ್,ನಾಗರಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಮುಖಂಡರುಗಳು ಇದ್ದರು.
ಸೈಕಲ್ ಯಾತ್ರೆ ನಿವೃತ್ತ ಯೋಧರು ಅಧಿಕಾರಿಗಳು ಮತ್ತು ಸಂಘಟನೆಗಳು ಸೇರಿ ಭಾರತೀಯರು ಸ್ವದೇಶಿ ವಸ್ತುಗಳನ್ನೇ ಬಳಸಬೇಕು ದೇಶದ ಆರ್ಥಿಕತೆ ಬೆಳೆಸಬೇಕು ಎಂದು ಜಾಗೃತಿ ಮೂಡಿಸಲು ಕರ್ನಾಟಕಾದ್ಯಂತ ಹಮ್ಮಿಕೊಂಡಿರುವ ಇದು ಮಹತ್ವದ ಅಭಿಯಾನವಾಗಿದೆ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ ಜಿ ಪುರಿ ಹೇಳಿದರು. ‘ಇಂತಹ ಚಳಿಯಲ್ಲಿಯೂ ಸುಮಾರು 70 ವರ್ಷ ವಯಸ್ಸಿನ ಹಿರಿಯ ನಾಗರಿಕರು ಹಮ್ಮಿಕೊಂಡಿರುವ ಸೈಕಲ್ ಜಾಥ ಅಭಿಯಾನವು ಇಂದಿನ ಯುವಕರಿಗೆ ಮಾದರಿಯಾಗಿದೆ.ಇದು ಮತಷ್ಟು ದೇಶಪ್ರೇಮ ಇಮ್ಮಡಿಗೊಳಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.