ADVERTISEMENT

ಪ್ರತಿ ಹಳ್ಳಿಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿ: ಸ್ಯಾಂಸನ್ ಮಾಳಿಕೇರಿ

ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದವರಿಗೆ ₹5 ಲಕ್ಷ ಪರಿಹಾರ ನೀಡುವಂತೆ ಕಾಂಗ್ರೆಸ್ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 4:51 IST
Last Updated 3 ಜೂನ್ 2021, 4:51 IST
ಸ್ಯಾಂಸನ್ ಮಾಳಿಕೇರಿ
ಸ್ಯಾಂಸನ್ ಮಾಳಿಕೇರಿ   

ಯಾದಗಿರಿ: ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿ ಕೋವಿಡ್‌ ಪರೀಕ್ಷೆ ಮಾಡಬೇಕು. ಜೊತೆಗೆ ಕೋವಿಡ್‌ ಭಯ ನಿವಾರಿಸಿ ಲಸಿಕೆ ಹಾಕಿಕೊಳ್ಳಲು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಸ್ಯಾಂಸನ್ ಮಾಳಿಕೇರಿ ಆಗ್ರಹಿಸಿದರು.

ಜಿಲ್ಲಾಡಳಿತ ರ್‍ಯಾಪಿಡ್‌ ಟೆಸ್ಟ್‌ ಮಾಡಬೇಕು. ಈಗ ಮಾತ್ರ ಸೋಂಕಿನ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯ. ಇಲ್ಲದಿದ್ದರೆ ಹಳ್ಳಿಯ ಮನೆಯಲ್ಲಿ ಇದ್ದುಅನೇಕರು ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುವಂತೆ ಆಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲ ಹಳ್ಳಿಗಳಲ್ಲಿ ಪರೀಕ್ಷೆ ಮಾಡಬೇಕು ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇತ್ತಿಚೆಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೂವರು ಸಾವನ್ನಪ್ಪಿದ್ದರೂ ಜಿಲ್ಲಾಡಳಿತ ಅದನ್ನು ಮರೆ ಮಾಚಿದೆ. ಯಾವುದೇ ಪರಿಹಾರ ಘೋಷಿಸಿಲ್ಲ. ಕೂಡಲೇ ಆ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಒದಗಿಸಬೇಕು ಒತ್ತಾಯಿಸಿದರು.

ADVERTISEMENT

ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ದೇಶದ ವಿವಿಧ ಕಡೆ ಮತ್ತು ರಾಜ್ಯದಲ್ಲಿ ಉಪಚುನಾವಣೆಗಳನ್ನು ನಡೆಸುವ ಮೂಲಕ ಕೊರೊನಾ ಹಬ್ಬಲು ಸರ್ಕಾರಗಳೇ ನೇರ ಕಾರಣವಾಗಿದೆ. ಕೊರೊನಾ ಬಗ್ಗೆ ಮುಂಚಿತವಾಗಿ ಅಗತ್ಯ ಸಿಬ್ಬಂದಿ, ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಅದನ್ನು ಕಡೆಗಣಿಸಿದ್ದ ಪರಿಣಾಮ ಸಾವಿರಾರು ಜನರ ಮರಣ ಹೋಮಕ್ಕೆ ಕಾರಣವಾಗಿದೆ ಎಂದು ಆಪಾದಿಸಿದರು.

ಶಾಸಕರನ್ನು ಬಂಧಿಸಿ: ಅತ್ಯಾಚಾರ ಆರೋಪ ಹೊತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಬೇಕು. ರಾಜರೋಷವಾಗಿ ಓಡಾಡುತ್ತಿದ್ದು, ಹೀಗಾಗಿ ತಡ ಮಾಡದೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಮಾತನಾಡಿ, ಇನ್ನೂ ಕೆಲವೇ ದಿನಗಳಲ್ಲಿ ಬಿತ್ತನೆ ಕಾರ್ಯ ಶುರುವಾಗುತ್ತಿದ್ದು, ಸ್ಥಳೀಯ ಸಹಕಾರ ಸಂಘಗಳಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ವಕ್ತಾರ ಮಲ್ಲಪ್ಪ ಗೋಗಿ, ಮುಖಂಡರಾದ ಸುರೇಶ ಜೈನ್, ಕೆಪಿಸಿಸಿ ವೀಕ್ಷಕ ರಾಘವೇಂದ್ರ ಮಾನಸಗಲ್, ಶರಣಪ್ಪ ಕೂಯಿಲೂರು ಮತ್ತು ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಸಿಬ್ಬಂದಿ ಭರ್ತಿ ಮಾಡಲುಒತ್ತಾಯ
ಕೋವಿಡ್ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಯಾದಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ ಒತ್ತಾಯಿಸಿದರು.

ಐಸಿಯುನಲ್ಲಿ ದಾಖಲಾದವರು ಗುಣಮುಖರಾಗಿ ಹೊರ ಬರುತ್ತಿಲ್ಲ. ಅಲ್ಲಿ ನುರಿತ ವೈದ್ಯರು, ನರ್ಸ್‌ಗಳು ಇಲ್ಲ.ಇದರಿಂದಾಗಿ ಸೋಂಕಿತರು ತೀವ್ರ ತೊಂದರೆ ಪಡುವಂತಾಗಿದೆ. ಸಕಾಲಕ್ಕೆ ಎಲ್ಲಾ ರೀತಿಯಿಂದ ಚಿಕಿತ್ಸೆ ಸಿಗುವಂತೆ ಜಿಲ್ಲಾಡಳಿತ ಮಾಡಿ ಸಾವಿನ ಪ್ರಮಾಣ ಇಳಿಕೆ ಮಾಡಬೇಕೆಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.