ಸುರಪುರ: ‘ಕೆಲವರು ಸರಳ ಅನುಕರಣೆ ಮಾಡಿ ಸಾಹಿತ್ಯ ಬರೆಯುತ್ತಾರೆ. ಇನ್ನು ಹಲವರು ಮಾದರಿಗಳನ್ನು ಅರಗಿಸಿಕೊಂಡು ರಚಿಸುತ್ತಾರೆ. ಆದರೆ ಸ್ವಾನುಭವದ ಸುಖವನ್ನು ಅನುಭವಿಸಿ ಬರೆಯುವ ಸಾಹಿತ್ಯ ಕೊನೆವರೆಗೆ ಉಳಿಯುತ್ತದೆ’ ಎಂದು ಖ್ಯಾತ ಕಥೆಗಾರ ಟಿ.ಎಸ್. ಗೊರವರ ಪ್ರತಿಪಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅರುಣ ಪ್ರಕಾಶನ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಗಝಲ್ ಪುಸಕ್ತಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಓದುಗರ ಮುಗ್ಧತೆ ಮತ್ತು ತಲ್ಲೀನತೆ ಒಂದು ಕಾವ್ಯದ ಯಶಸ್ಸಿನ ಮೂಲಾಧಾರ. ಸಾಹಿತ್ಯ ರಚನೆ ಸದುದ್ದೇಶದಿಂದ ಕೂಡಿರಬೇಕು. ಸಮಾಜದ ಬದಲಾವಣೆಗೆ, ಅಭಿವೃದ್ಧಿಗೆ ನೆರವಾಗಬೇಕು. ಅಂತಹ ಸಾಹಿತ್ಯ ರಚಿಸಲು ಸಾಹಿತಿಗಳು ಉತ್ಸುಕರಾಗಬೇಕು’ ಎಂದು ಸಲಹೆ ನೀಡಿದರು.
ಮುಖಂಡರಾದ ರಾಜಾ ಮುಕುಂದನಾಯಕ, ಸುರೇಶ ಸಜ್ಜನ್, ಸಾಹಿತಿಗಳಾದ ಶಾಂತಪ್ಪ ಬೂದಿಹಾಳ, ಶ್ರೀನಿವಾಸ ಜಾಲವಾದಿ, ಪ್ರಾಧ್ಯಾಪಕ ಮಲ್ಲಿನಾಥ ಯಾಳವರ, ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.
ಎಚ್. ರಾಠೋಡ ಅವರ ‘ಎನ್ನದೆಯ ಭಾವ ಕುಸುಮಗಳು ಮತ್ತು ವೆಂಕಟೇಶ ಪಾಟೀಲ ಅವರ ‘ಬನದ ಕೋಗಿಲೆಗಳು’ ಗಝಲ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಪ್ರಭುಲಿಂಗ ಸ್ವಾಮೀಜಿ ಕಡ್ಲೆಪ್ಪಮಠ, ಹೈಕೋರ್ಟ್ ವಕೀಲ ಜೆ. ಅಗಸ್ಟಿನ್, ಹುಣಸಗಿ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಲಭೀಮರಾಯ ದೇಸಾಯಿ, ಅರುಣ ಪ್ರಕಾಶನದ ಬೋರಮ್ಮ ಯಾಳವಾರ ಉಪಸ್ಥಿತರಿದ್ದರು.
ಕನಕಪ್ಪ ವಾಗಣಗೇರಿ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ರಜಾಕ ಭಾಗವಾನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.