ADVERTISEMENT

ಜಿಲ್ಲೆಯ ವೈದ್ಯಕೀಯ ಕಾಲೇಜು ಕನಸಿಗೆ ರೆಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 16:19 IST
Last Updated 4 ಜನವರಿ 2020, 16:19 IST
ಡಾ.ಶಂಕರಗೌಡ ಐರೆಡ್ಡಿ
ಡಾ.ಶಂಕರಗೌಡ ಐರೆಡ್ಡಿ   

ಯಾದಗಿರಿ: ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿಯಾಗಿ ರಾಯಚೂರು ವೈದ್ಯಕೀಯ ಕಾಲೇಜು ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಶಂಕರಗೌಡ ಐರೆಡ್ಡಿ ಅವರನ್ನು ನೇಮಕಮಾಡಿದೆ. ಇದರಿಂದ ವೈದ್ಯಕೀಯ ಕಾಲೇಜು ಕನಸಿಗೆ ರೆಕ್ಕೆ ಮೂಡಿದಂತಾಗಿದೆ.

ಡಾ.ಶಂಕರಗೌಡ ಐರೆಡ್ಡಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದ್ದು, ಸದ್ಯಕ್ಕೆ ಇದರಲ್ಲೇ ಮೆಡಿಕಲ್ ಕಾಲೇಜನ್ನು ಶೀಘ್ರದಲ್ಲಿ ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಆಸ್ಪತ್ರೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ (ಮುಖ್ಯರಸ್ತೆ)ಯಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ ₹50 ಕೋಟಿ ರೂಪಾಯಿ ಆಗಲಿದ್ದು, ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಜೊತೆಗೆ ಪೀಠೋಪಕರಣ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ.

ADVERTISEMENT

ಡಾ.ಶಂಕರಗೌಡ ಐರೆಡ್ಡಿ ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದವರು.

‘ವೈದ್ಯಕೀಯ ಕಾಲೇಜಿಗೆ ಸುಮಾರು 750 ಹಾಸಿಗೆಗಳ ಆಸ್ಪತ್ರೆ ಅಗತ್ಯವಿದೆ. ಸದ್ಯ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿಯೇ ಮೆಡಿಕಲ್ ಕಾಲೇಜನ್ನು 2020-21ನೇ ಸಾಲಿನಲ್ಲಿ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಸ್ಥೆಗೆ ಪತ್ರ ಬರೆಯುತ್ತೇನೆ. ನಂತರ 2ರಿಂದ 3 ತಿಂಗಳಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯ ತಂಡ ಆಗಮಿಸಿ ಜಿಲ್ಲಾಸ್ಪತ್ರೆಯನ್ನು ಪರಿವೀಕ್ಷಣೆ ಮಾಡಲಿದೆ. ಮೆಡಿಕಲ್ ಕಾಲೇಜು ಆರಂಭವಾದರೆ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಭಾಗ್ಯದ ಜೊತೆಗೆ ಆಸಕ್ತ ವಿದ್ಯಾರ್ಥಿಗಳಿಗೆ ಉನ್ನತ ವೈದ್ಯಕೀಯ ಶಿಕ್ಷಣ ದೊರಕಿದಂತಾಗುತ್ತದೆ ಎಂದು ಡಾ.ಶಂಕರಗೌಡ ಐರೆಡ್ಡಿ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.