ADVERTISEMENT

ಯಾದಗಿರಿ: ಪಾಲನೆಯಾಗದ ಸಂಚಾರ ನಿಯಮ

ಬಿ.ಜಿ.ಪ್ರವೀಣಕುಮಾರ
Published 3 ಫೆಬ್ರುವರಿ 2025, 7:41 IST
Last Updated 3 ಫೆಬ್ರುವರಿ 2025, 7:41 IST
ಯಾದಗಿರಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್‌ ಚಾಲಾಯಿಸುತ್ತ ತೆರಳುವುದು
ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್
ಯಾದಗಿರಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್‌ ಚಾಲಾಯಿಸುತ್ತ ತೆರಳುವುದು ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಚಾರ ನಿಯಮಗಳ ಉಲ್ಲಂಘನೆ ಮಿತಿಮೀರಿದೆ. ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ, ಟ್ರಾಫಿಕ್‌ ಸಿಗ್ನಲ್‌ ಜಂಪ್‌ ಮಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಚಾಲಕರು ಪ್ರಾಣಕ್ಕೆ ಎರವಾಗಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಹಲವು ಜಾಗೃತಿ ಅಭಿಯಾನ ಕೈಗೊಂಡಿದ್ದರೂ ಚಾಲಕರು ಪಾಲಿಸುತ್ತಿಲ್ಲ.

ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್‌ ಓಡಿಸುವುದು ಕೂಡ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಇದರ ಬಗ್ಗೆ ಗೊತ್ತಿದ್ದೂ ದ್ವಿಚಕ್ರ ವಾಹನ ಸವಾರರು ಪಾಲಿಸುತ್ತಿಲ್ಲ. ಮೊಬೈಲ್‌ನಲ್ಲಿ ಮಾತಾನಾಡಿಕೊಂಡು ಬೈಕ್‌ ಓಡಿಸುವುದು ಒಂದು ರೀತಿಯ ಫ್ಯಾಶನ್‌ ಆದಂತಿದೆ. ಯುವಕರು ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ನೋಡನೋಡುತ್ತಿದ್ದಂತೆಯೇ ಸಿಗ್ನಲ್‌ ಜಂಪ್‌ ಮಾಡುತ್ತಾರೆ. ಬೈಕ್‌ ಚಾಲನೆ ಮಾಡುವಾಗ ಕರೆ ಬಂದಾಗ ಮೊಬೈಲ್‌ ನೋಡುವುದು ಮತ್ತೆ ಮುಂದೆ ನೋಡಿ ಚಾಲನೆ ಮಾಡುತ್ತಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಮೊಬೈಲ್‌ಗೆ ಕಿವಿಯಾನಿಸಿ ತೆರಳುತ್ತಿದ್ದಾರೆ. ತಿರುವಿನಲ್ಲಿ ಎಡಭಾಗದಿಂದ ಒಮ್ಮೆಲೇ ಬಲಭಾಗಕ್ಕೆ, ಬಲಭಾಗದಿಂದ ಎಡಭಾಗಕ್ಕೆ ಹೋಗುತ್ತಾರೆ. ಹಿಂದೆ ಯಾರಿದ್ದಾರೆ ಎನ್ನುವುದನ್ನೂ ನೋಡುವುದಿಲ್ಲ. ನಗರದ ಬಹುತೇಕ ಕಡೆ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ತಮ್ಮ ವಾಹನಗಳ ಇಂಡಿಕೇಟರ್‌ ಹಾಕದೆ ನುಗ್ಗುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಇದು ಸಣ್ಣಪುಟ್ಟ ಜಗಳಗಳಿಗೂ ಆಸ್ಪದ ನೀಡಿದಂತೆ ಆಗುತ್ತಿದೆ.

ಮೊಬೈಲ್‌ ನೋಡುತ್ತಾ ಬೈಕ್‌ ಚಾಲನೆ ಮಾಡಿದ ಚಾಲಕ

ಬೇಕಿದೆ ಸಂಚಾರ ನಿಯಮದ ಪಾಲನೆ:

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಸಂಚಾರ ನಿಯಮಗಳ ಕುರಿತು ಪೊಲೀಸ್‌ ಇಲಾಖೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಆದರೆ, ವಾಹನ ಸವಾರರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರಮುಖ ವೃತ್ತಗಳ ಬಳಿ ಪೊಲೀಸರಿದ್ದರೂ ವಾಹನ ಚಾಲಕರು ಸಂಚಾರ ನಿಯಮ ಪಾಲನೆಗೆ ಒತ್ತು ನೀಡುತ್ತಿಲ್ಲ. ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ.

ADVERTISEMENT
ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್‌ ಚಾಲಾಯಿಸುವ ದೃಶ್ಯ
ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಕಾನೂನು ಪ್ರಕಾರ ಅಪರಾಧ. ಇದಕ್ಕೆ ₹1500 ದಂಡ ವಿಧಿಸುವ ಅಧಿಕಾರ ಇದೆ. ಚಾಲಕರು ದಂಡಕ್ಕೆ ಅವಕಾಶ ಕೊಡಬಾರದು
ವೀರೇಶ ಟ್ರಾಫಿಕ್‌ ಪಿಎಸ್‌ಐ ಯಾದಗಿರಿ
ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ ಮಾಡಬಾರದು ಎಂಬುದು ಗೊತ್ತಿದೆ. ಆದರೆ ಅನಿವಾರ್ಯ ಇದ್ದಾಗ ಬಳಕೆ ಮಾಡಬೇಕಾಗುತ್ತದೆ. ಅನವಶ್ಯ ಬಳಕೆ ಸಲ್ಲದು
ಅಭಿನಾಶ ಯುವ‌ಕ

ಬೆಳಗದ ಟ್ರಾಫಿಕ್‌ ಸಿಗ್ನಲ್‌ ದೀಪ!

ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ ದೀಪವು ಹಲವಾರು ತಿಂಗಳುಗಳಿಂದ ಬೆಳಗುತ್ತಿಲ್ಲ. ಇದು ಚಾಲಕರಿಗೆ ನಿಯಮ ಪಾಲಿಸದೇ ಇರಲು ಒಂದು ಕಾರಣವಾದರೆ, ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ನಗರದ ಸುಭಾಷ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಎರಡು ಕಡೆ ಸಿಗ್ನಲ್‌ಗಳಿವೆ. ಸುಭಾಷ ವೃತ್ತದಲ್ಲಿ ಮಾತ್ರ ಸಿಗ್ನಲ್‌ ದೀಫ ಬೆಳಗುತ್ತಿದೆ. ನಗರದಲ್ಲಿ ಟ್ರಾಫಿಕ್‌ ಸಿಗ್ನಲ್‌ ದೀಪ ಬೆಳಗದ ಕಾರಣ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ.

ಬೈಕ್, ಆಟೊ, ಟಂಟಂ, ಗೂಡ್ಸ್‌ ಗಾಡಿಗಳು ಸಂಚಾರ ನಿಯಮ ಪಾಲಿಸುತ್ತಿಲ್ಲ. ಸಿಗ್ನಲ್‌ ಇಲ್ಲದ ಕಾರಣ ಎಲ್ಲೆಂದರೆಲ್ಲಿ ವಾಹನಗಳು ನುಗ್ಗುವುದರಿಂದ ಬೈಕ್‌ ಸವಾರರು ಮೈಯಲ್ಲಾ ಕಣ್ಣಾಗಿಸಿಕೊಂಡು ವಾಹನ ಚಲಾಯಿಸಬೇಕಿದೆ. ಭಾರಿ ವಾಹನಗಳು ಬೆಳಗಿನ ವೇಳೆಯಲ್ಲಿ ನಗರದಲ್ಲಿ ಸಂಚರಿಸುತ್ತಿದ್ದು, ಕಡಿವಾಣ ಹಾಕಬೇಕಿದೆ.

ನಗರದಲ್ಲಿ ಪ್ರಮುಖ ವೃತ್ತಗಳಲ್ಲಿ, ತಿರುವುಗಳಲ್ಲಿ ವಾಹನಗಳು ಬೇಕಾಬಿಟ್ಟಿ ಸಂಚರಿಸುತ್ತವೆ. ಯಾದಗಿರಿ ನಗರದ ಗಂಜ್‌ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಬೇಕು ಎನ್ನುವ ಬೇಡಿಕೆ ಇದ್ದರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾದಗಿರಿ–ಹೈದರಾಬಾದ್‌ ಮುಖ್ಯ ರಸ್ತೆ ಇದಾಗಿದ್ದು, ಈ ಭಾಗದಲ್ಲಿ ವಸತಿ ನಿಲಯಗಳಿವೆ. ಶಾಲಾ ಮಕ್ಕಳು ಸೇರಿದಂತೆ ರಸ್ತೆ ದಾಟಲು ಪರದಾಡಬೇಕಿದೆ. ಹೀಗಾಗಿ ಇಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಬೇಕು ಎಂದು ಸ್ಥಳೀಯ ನಿವಾಸಿ ರಮೇಶ ಪೂಜಾರಿ ಒತ್ತಾಯಿಸುತ್ತಾರೆ.

‘ಮೊಬೈಲ್ ಬಳಕೆ ಬಗ್ಗೆ ಅಭಿಯಾನ’

ಕಳೆದ ಡಿಸೆಂಬರ್ ತಿಂಗಳಿಂದ ಪೊಲೀಸ್‌ ಇಲಾಖೆ ಹಲವಾರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿರುವ ಪೊಲೀಸ್‌ ಇಲಾಖೆ ಮುಂದಿನ ದಿನಗಳಲ್ಲಿ ವಾಹನ ಚಾಲಾಯಿಸುವಾಗ ಮೊಬೈಲ್‌ ಬಳಸಬಾರದು ಎನ್ನುವ ಕುರಿತು ಅಭಿಯಾನ ಕೈಗೊಳ್ಳಲು ಯೋಚಿಸಿದೆ.

‘ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೈಕ್‌ ಸವಾರರು ಸೇರಿದಂತೆ ವಾಹನ ಚಾಲಕರಿಗೆ ಜಾಗೃತಿ ಸಂದೇಶಗಳನ್ನು ತಲುಪಿಸಲಾಗುತ್ತಿದೆ. ಅದರಂತೆ ಹೆಲ್ಮೆಟ್‌ ಧರಿಸುವುದು, ಚಾಲನಾ ಪರವಾನಗಿ, ವಿವಿಧ ಜಾಗೃತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಚಾಲನೆ ವೇಳೆ ಮೊಬೈಲ್‌ ಬಳಸಿದರೆ ಆಗುವ ದುಷ್ಪರಿಣಾಮ ಬಗ್ಗೆ ಚಾಲಕರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್‌ ಶಂಕರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಜನವರಿ 31ರಂದು ಹೆಲ್ಮೆಟ್‌ ಧರಿಸದವರನ್ನು ಗುರುತಿಸಿ ದಂಡ ವಿಧಿಸಲಾಗಿದೆ. ಜಿಲ್ಲೆಯಾದ್ಯಂದ 73 ಜನರಿಗೆ ₹500ರಂತೆ ದಂಡ ಹಾಕಲಾಗಿದೆ. ಇನ್ಮೆಂದೆ ವಾರದಲ್ಲಿ ಎರಡು ದಿನ ಜಾಗೃತಿಗೆ ಮೀಸಲೀಡಲಾಗುವುದು’ ಎಂದು ತಿಳಿಸಿದ್ದಾರೆ.

‘ಪೊಲೀಸರು ದಂಡ ಹಾಕಬಹುದು. ವಾಹನ ಚಾಲಕರು ಸಂಚಾರ ನಿಯಮ ಪಾಲಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಬಾರದು ಎಂಬ ಕನಿಷ್ಠ ಜ್ಞಾನ ಇರಬೇಕು’ ಎಂದು ಹೇಳಿದ್ದಾರೆ.

ಬೈಕ್‌ ಚಾಲಾಯಿಸುತ್ತಾ ಮೊಬೈಲ್‌ ಬಳಕೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.