ಸುರಪುರ: ತಾಲ್ಲೂಕಿನ ಹಾಲಗೇರಾ ಗ್ರಾಮದ ಭತ್ತದ ಗದ್ದೆಯಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಸೋಮವಾರ ಎರಡು ಮೊಸಳೆ ಸೆರೆ ಹಿಡಿದಿದ್ದಾರೆ.
ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾದ ಕಾರಣ ಮೊಸಳೆಗಳು ಆಹಾರ ಅರಸಿ ಕೆರೆ, ಹಳ್ಳಕೊಳ್ಳ ಮತ್ತು ಹೊಲಗಳಿಗೆ ನುಗ್ಗುತ್ತಿವೆ. ತಾಲ್ಲೂಕಿನ ಹಾಲಗೇರಾ ಗ್ರಾಮ ವ್ಯಾಪ್ತಿಯ ಕೆರೆಗೆ ಕಾಲುವೆಯಿಂದ ನೀರು ಬರುತ್ತದೆ. ಕೆರೆಯ ಕೆಳಭಾಗದಲ್ಲಿರುವ ಭತ್ತದ ಗದ್ದೆಗಳಿಗೆ ಮೊಸಳೆ ನುಗ್ಗಿವೆ.
ಅಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರು ನೋಡಿ ಕರವೇ ಸದಸ್ಯ ಭೀಮರಾಯ ಚಿಕ್ಕಮೇಟಿ ಅವರಿಗೆ ತಿಳಿಸಿದಾಗ ಅವರು ವಲಯ ಅರಣ್ಯ ಅಧಿಕಾರಿ ಗುಂಡುಸಿಂಗ್ ಗಮನಕ್ಕೆ ತಂದಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಬಸವರಾಜ ನಾಯಕ ನೇತೃತ್ವದಲ್ಲಿ ತಂಡ ರಚಿಸಿ ಮೊಸಳೆಗಳನ್ನು ಸೆರೆ ಹಿಡಿದಿದ್ದಾರೆ.
’ಒಂದು ಮೊಸಳೆ 40 ಕೆಜಿ ಭಾರವಿದ್ದು, 5 ಅಡಿ ಉದ್ದವಿದೆ. ಇನ್ನೊಂದು 60 ಕೆಜಿ ಭಾರವಿದ್ದು, 7 ಅಡಿ ಉದ್ದ ಇದೆ. ಮೊಸಳೆಗಳನ್ನು ಸೆರೆ ಹಿಡಿದು ಮಂಗಳವಾರ ನಾರಾಯಣಪುರದ ಜಲಾಶಯದ ಹಿನ್ನೀರಿನಲ್ಲಿ ಬಿಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಗುಂಡುಸಿಂಗ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಸವರಾಜ ನಾಯಕ, ಗಸ್ತು ವನಪಾಲಕ ರಾಜಪ್ಪ, ಅರಣ್ಯ ವೀಕ್ಷಕರಾದ ಬಸವರಾಜ, ವರುಣ, ಶಿವರಾಜ, ಸಿಬ್ಬಂದಿ ಗಳಾದ ಹಣಮಂತನಾಯಕ, ಮೌನೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.