ವಡಗೇರಾ: ರೈತರ ಕಬ್ಬಿನ ಬಾಕಿ ಹಣವನ್ನು 10 ದಿನಗಳ ಒಳಗಡೆ ಪಾವತಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದರು.
ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದ ಸಮೀಪವಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಗುರುವಾರ ಭೇಟಿ ನೀಡಿದ ನಂತರ ಮಾತನಾಡಿದರು.
ಯಾದಗಿರಿ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಯ ರೈತರು ಇಲ್ಲಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಮಾರಾಟ ಮಾಡಿದ್ದಾರೆ. ಆದರೆ, ಮೂರು–ನಾಲ್ಕೂ ತಿಂಗಳುಗಳು ಕಳೆದರೂ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ನಿಗದಿತ ಅವಧಿಯಲ್ಲಿ ಕಬ್ಬಿನ ಹಣ ರೈತರಿಗೆ ಪಾವತಿ ಮಾಡದೆ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ರೈತರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ. ಸಕಾಲಕ್ಕೆ ಹಣ ಪಾವತಿ ಮಾಡುತ್ತಾರೆ ಎಂಬ ಆಶಾಭಾವನೆಯಿಂದ ರೈತರು ಕಬ್ಬು ಮಾರಾಟ ಮಾಡಿದ್ದಾರೆ. ಆದರೆ, ಕಾರ್ಖಾನೆ ಮಂಡಳಿಯವರು ಹಣ ಪಾವತಿ ಮಾಡದೆ ರೈತರಿಗೆ ಸತಾಯಿಸುತ್ತಿದ್ದು, ಇದರಿಂದ ರೈತರ ಉಪಜೀವನಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು.
ಕೂಡಲೇ ಆಡಳಿತ ಮಂಡಳಿಯವರು ರೈತರ ಕಬ್ಬಿನ ಬಾಕಿ ಹಣವನ್ನು ಪಾವತಿಸಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ ತಡಿಬಿಡಿ, ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕಾ, ಗೌರವಾಧ್ಯಕ್ಷ ಶರಣು ಜಡಿ, ಹಳ್ಳೆಪ್ಪ ತೇಜೇರ, ತಿರುಮಲ ಮುಸ್ತಾಜೀರ, ಮುಕ್ಕಣ್ಣ ಮುನಮುಟಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.