
ಸೈದಾಪುರ: ‘ಇಂದು ಶಾಂತಿ ,ಅಹಿಂಸೆಗೋಸ್ಕರ ನಮ್ಮ ಕುಲ ದೇವತೆ ವಾಸವಿದೇವಿಯು ಅಗ್ನಿ ಪ್ರವೇಶದೊಂದಿಗೆ ಪ್ರಾಣ ತ್ಯಾಗ ಮಾಡಿ, ದೇವತೆಯ ರೂಪದಲ್ಲಿ ದಿವ್ಯ ದರ್ಶನ ನೀಡಿ ಜಗತ್ತನ್ನು ಜಯಿಸಿದ ದಿನವಾಗಿದೆ’ ಎಂದು ಕರ್ನಾಟಕ ರಾಜ್ಯ ಆರ್ಯ ವೈಶ್ಯ ಮಹಾಸಭಾದ ನಿರ್ದೇಶಕ ರಾಘವೇಂದ್ರ ಬಾದಾಮಿ ಹೇಳಿದರು.
ಪಟ್ಟದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ವಾಸವಿದೇವಿ ಅಗ್ನಿಪ್ರವೇಶ ದಿನದ ಪ್ರಯುಕ್ತ ಆರ್ಯ ವೈಶ್ಯ ಸಮಾಜದಿಂದ ಹಮ್ಮಿಕೊಂಡಿದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ವೈಶ್ಯ ಸಮಾಜವು ಅಹಿಂಸೆ, ತ್ಯಾಗ ನಂಬಿದ ಜನಾಂಗವಾಗಿದೆ. ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು. ಆದರಿಂದ ನಾವು ನಮ್ಮ ಜೀವನದಲ್ಲಿ ಧರ್ಮದ ನಿಯಮಗಳನ್ನು ಪಾಲಿಸಿದಾಗ, ನಮ್ಮ ನಡತೆ ಸಮಾಜಕ್ಕೆ ಮಾದರಿಯಾಗುತ್ತದೆ. ಇದು ವ್ಯಕ್ತಿಗತವಾಗಿ ಮತ್ತು ಸಮುದಾಯದ ಮಟ್ಟದಲ್ಲಿ ರಕ್ಷಣೆ ನೀಡುತ್ತದೆ. ಧರ್ಮವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅವಶ್ಯಕವಾಗಿದೆ. ತಂದೆ-ತಾಯಿಯಿಂದ ಮಕ್ಕಳಿಗೆ ಮತ್ತು ಗುರುಗಳಿಂದ ಶಿಷ್ಯರಿಗೆ ಸಂಪ್ರದಾಯಗಳನ್ನು ಹಸ್ತಾಂತರಿಸುವ ಮೂಲಕ ಇದನ್ನು ಇತಂಹ ನೈತಿಕತೆಯ ಧಾರ್ಮಿಕ ಸಂಪ್ರದಾಯಗಳನ್ನು ಬೆಳಸಿಕೊಂಡು ಹೋಗುವುದು ನಮ್ಮ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದರು.
ಇದಕ್ಕೂ ಮುಂಚಿತವಾಗಿ ಆರ್ಯವೈಶ್ಯ ಮಹಿಳಾ ಸಂಘದಿಂದ ದೇವಿಗೆ ಮತ್ತು ಗೋವಿಗೆ ವಿವಿಧ ತರಹದ ಹೂಗಳಿಂದ ಅಲಂಕಾರ ಮಾಡಿ, ಭಕ್ತಿಗೀತೆ, ಭಜನೆ ಗೀತೆಗಳನ್ನು ಹಾಡಿ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಶಾಲಾ ಮಕ್ಕಳಿಗೆ ಮತ್ತು ಆಗಮಿಸಿದ ಭಕ್ತರಿಗೆ ಸಿಹಿಊಟದ ಪ್ರಸಾದವನ್ನು ನೀಡಲಾಯಿತು.
ಈ ವೇಳೆ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕೃಷ್ಣ ಗುಜ್ಜಾ, ಮಹಿಳಾ ಸಂಘದ ಅಧ್ಯಕ್ಷೆ ವಸಂತಮ್ಮ ಮಿರಿಯಲ್, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಲದಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.