ADVERTISEMENT

ಬಾರದ ಆವಕ: ತರಕಾರಿ ದರ ಏರಿಕೆ

ಮಳೆ ನೀರಿನಲ್ಲಿ ಜಲಾವೃತ್ತವಾದ ತರಕಾರಿ ಬೆಳೆಗಳು

ಬಿ.ಜಿ.ಪ್ರವೀಣಕುಮಾರ
Published 23 ಜುಲೈ 2020, 5:51 IST
Last Updated 23 ಜುಲೈ 2020, 5:51 IST
ಯಾದಗಿರಿ ಚಿರಂಜೀವಿ ಶಾಲೆ ಪಕ್ಕದಲ್ಲಿರುವ ಮಾರುಕಟ್ಟೆ
ಯಾದಗಿರಿ ಚಿರಂಜೀವಿ ಶಾಲೆ ಪಕ್ಕದಲ್ಲಿರುವ ಮಾರುಕಟ್ಟೆ   

ಯಾದಗಿರಿ: ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ತರಕಾರಿ ಬೆಳೆಗೆ ಹಾನಿಯಾಗಿದೆ. ಇದರ ಪರಿಣಾಮ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಬೇರೆ ಜಿಲ್ಲೆಗಳಿಂದ ಆವಕ ಬರುವುದು ತಡವಾಗಿದ್ದರಿಂದ ಸ್ಥಳೀಯವಾಗಿ ಸಿಗುವ ತರಕಾರಿ ದರ ₹5 ರಿಂದ ₹ 10ರವರೆಗೆ ಹೆಚ್ಚಿದೆ.

ವಾಡಿಕೆಗಿಂತ ಮಳೆ ಹೆಚ್ಚು ಬಂದಿರುವ ಕಾರಣ ಟೊಮೆಟೊ, ಬದನೆ ಕಾಯಿ, ಚವಳೆಕಾಯಿ, ಹೀರೇಕಾಯಿ, ನುಗ್ಗೆಕಾಯಿ ಬೆಲೆ ಹೆಚ್ಚಳವಾಗಿದೆ. ಸೌತೆಕಾಯಿ ₹40, ಸೋರೆಕಾಯಿ ₹40, ಮೂಲಂಗಿ ₹40, ಟೊಮೆಟೊ ₹40, ಆಲೂಗಡ್ಡೆ ₹40, ಈರುಳ್ಳಿ ₹30 ಕೇಜಿಗೆ ಮಾರಾಟವಾಗುತ್ತಿದೆ.

ಬೀನ್ಸ್, ಗಜ್ಜರಿ ಬೇರೆ ಜಿಲ್ಲೆಗಳಿಂದ ಆಮದು ಆಗುತ್ತಿದ್ದು, ಬೆಲೆ ಸಹಜವಾಗಿ ಹೆಚ್ಚಿದೆ. ಇನ್ನೂ ಸ್ಥಳೀಯವಾಗಿ ಸಿಗುವ ತರಕಾರಿ ಮಳೆಯಿಂದ ಆವೃತ್ತವಾಗಿದ್ದು, ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ADVERTISEMENT

ಅತ್ತ ಬೆಳೆಗಾರರು ಅಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಅಧಿಕ ತೇವಾಂಶದಿಂದ ಬದನೆಕಾಯಿಗೆ ಹುಳ ಬಾಧೆ ಹೆಚ್ಚಾಗಿದ್ದು, ಖರೀದಿಸುವವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ರಸ್ತೆಗೆ ಸುರಿಯಬೇಕಾಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿದರು.

‘ಹೆಚ್ಚಿನ ತರಕಾರಿ ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ ಸಂಜೆ ವೇಳೆಗೆ ಕಡಿಮೆ ಬೆಲೆಗೆ ಮಾರುತ್ತೇವೆ. ಮರುದಿನ ರೈತರಿಂದ ಮತ್ತೆ ಖರೀಸುತ್ತೇವೆ. ಇದರಿಂದ ನಮಗೆ ಒಮ್ಮೊಮ್ಮೆ ನಷ್ಟವಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಅಂಜಮ್ಮ ಮಂಜುಳಕರ.

‘ಲಾಕ್ ಡೌನ್ ಕಾರಣ ತೋಟಗಳಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಆಗುತ್ತಿಲ್ಲ. ಇದರಿಂದ ಬೆಲೆ ಹೆಚ್ಚಾಗಿದೆ. ವ್ಯಾಪಾರಿಗಳು ದರ ಹೆಚ್ಚಳ ಮಾಡಿದ್ದಾರೆ’ ಎಂದು ಅವರು ಅಭಿಪ್ರಾಯಿಸಿದರು.

ಸೊಪ್ಪುಗಳ ದರ ಕಡಿಮೆ:ತರಕಾರಿಗಳಲ್ಲಿ ಸೊಪ್ಪುಗಳ ಬೆಲೆ ಕಡಿಮೆ ಇದೆ. ಪಾಲಕ್‌ ಸೊಪ್ಪು ₹20ಗೆ 3 ಕಟ್ಟು, ಮೆಂತ್ಯೆ ₹20ಗೆ 1 ಕಟ್ಟು, ಪುಂಡಿಪಲ್ಯೆ ₹20ಗೆ ಆರು ಕಟ್ಟು, ರಾಜಗಿರಿ ₹20ಕ್ಕೆ ನಾಲ್ಕು ಕಟ್ಟು, ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಒಂದು ಕಟ್ಟು ₹30, ಈರುಳ್ಳಿ ಸೊಪ್ಪು ಕೇಜಿಗೆ ₹80 ಇದೆ.

ನುಗ್ಗೆಕಾಯಿ ಬೆಲೆ ಗಗನಕ್ಕೆ:ನುಗ್ಗೆಕಾಯಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಕೆಜಿಗೆ ₹180 ದರ ಇದೆ. ಬೇಸಿಗೆಯಲ್ಲಿ ಕೆಜಿಗೆ ₹ 80 ಮಾರಾಟವಾಗುತ್ತಿತ್ತು. ಈಗ ಏಕಾಏಕಿ ಬೇರೆ ಕಡೆ ಬರುವುದು ಬಂದ್ ಆಗಿದೆ. ಶಹಾಪುರ, ಕಲಬುರ್ಗಿ ಮುಂತಾದ ಕಡೆಗಳಿಂದ ಮಾತ್ರ ಬರುತ್ತಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ಇನ್ನು ತಗ್ಗು ಪ್ರದೇಶದ ತರಕಾರಿ ತೋಟಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ‌. ಕಾಯಿ ಬಿಡುವ ಹಂತದಲ್ಲಿ ಬೆಳೆ ಹಾನಿಯಾಗಿದೆ ಎಂದು ರೈತರು ನೋವಿನಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.