ADVERTISEMENT

ಯಾದಗಿರಿ| ಗ್ರಾಮ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮುಖ್ಯ: ಜಿಪಂ ಸಿಇಒ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:05 IST
Last Updated 14 ಜನವರಿ 2026, 6:05 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಪ್ರಶಂಸೆ ಪತ್ರ ನೀಡಿದರು
ಯಾದಗಿರಿಯಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಪ್ರಶಂಸೆ ಪತ್ರ ನೀಡಿದರು   

ಯಾದಗಿರಿ: ‘ಗ್ರಾಮಗಳ ಸ್ವಚ್ಛತೆ ನಿರ್ವಹಣೆಯ ಜವಾಬ್ದಾರಿ ಗ್ರಾಮ ಪಂಚಾಯಿತಿಗಳದ್ದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಾಹಸ್ ಸಂಸ್ಥೆ, ರೈನ್ ಮ್ಯಾಟರ್ ಫೌಂಡೇಷನ್, ಸ್ವಚ್ಛ ಭಾರತ ಮಿಷನ್ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಯೋಗ ಅಭಿಯಾನ ವತಿಯಿಂದ ಆಯೋಜಿಸಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮಗಳ ಸ್ವಚ್ಛತೆಯ ಯಶಸ್ಸಿಗೆ ಸ್ವಚ್ಛತಾ ಸಿಬ್ಬಂದಿ, ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಪ್ರತಿಯೊಂದು ಮನೆಯಲ್ಲಿ ಉತ್ಪತ್ತಿ ಆಗುತ್ತಿರುವ ಘನತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

‘ಪ್ಲಾಸ್ಟಿಕ್ ಬಳಕೆಯ ವಸ್ತುಗಳನ್ನು ತ್ಯಜಿಸಿ, ಮರು ಬಳಕೆಯಾಗುವ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು. ಇದು ಪರಿಸರ ಸಂರಕ್ಷಣೆಯಲ್ಲಿ ನಮ್ಮಲ್ಲೆರ ಜವಾಬ್ದಾರಿಯಾಗಿದೆ. ಗ್ರಾಮ ಪಂಚಾಯತಿಯ ಸ್ವಚ್ಛವಾಹಿನಿ ಪ್ರತಿ ದಿನ ಓಡಿಸಬೇಕು.ಗ್ರಾಮದಲ್ಲಿನ ಎಲ್ಲಾ ಮನ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಿಕೊಂಡು ಬರಬೇಕು’ ಎಂದು ಹೇಳಿದರು.

‘ಮನೆ, ಅಂಗಡಿ, ಹೋಟೆಲ್‌ ಇತ್ಯಾಧಿ ಕಡೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿ ವಿಂಗಡಿಸಿ  ಸಂಗ್ರಹಣೆ ಮಾಡಬೇಕು. ಈ ಅಭ್ಯಾಸವನ್ನು ಪ್ರತಿ ಕುಟುಂಬದ ಸದಸ್ಯರು ಅಳವಡಿಸಿಕೊಳ್ಳಬೇಕು’ ಎಂದರು.

ಕಾರ್ಯಗಾರದಲ್ಲಿ ಠಾಣಗುಂದಿ ಸ್ವಚ್ಛವಾಹಿನಿ ಚಾಲಕಿ ವಿಜಯಕ್ಷ್ಮಿ ಮತ್ತು ರಾಮಸಮುದ್ರಾ ಗ್ರಾಮ ಪಂಚಾಯತಿಯ ಸ್ವಚ್ಛವಾಹಿನಿ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ, ತಾಲ್ಲೂಕು ಯೋಜನಾಧಿಕಾರಿ ಶಶಿಧರ ಹಿರೇಮಠ, ಜಿಲ್ಲಾ ಐಇಸಿ ಸಂಯೋಜಕ ಶಿವಕುಮಾರ, ಸಾಹಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ರವಿಚಂದ್ರ ಚಟ್ನಳ್ಳಿ, ಸ್ವಚ್ಛ ಭಾರತ ಮಿಷನ್ ಯೋಜನೆ ಜಿಲ್ಲಾ ಸಂಯೋಜಕರಾದ ವೆಂಕಟೇಶ್, ನಾರಾಯಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.