ADVERTISEMENT

ಸುಭದ್ರ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ: ಬಿ. ಜಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 14:27 IST
Last Updated 16 ಏಪ್ರಿಲ್ 2024, 14:27 IST
ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಬಿಜೆಪಿ ಶಹಾಪುರ ಮಂಡಲ ವತಿಯಿಂದ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು
ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಬಿಜೆಪಿ ಶಹಾಪುರ ಮಂಡಲ ವತಿಯಿಂದ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿದರು   

ಕೆಂಭಾವಿ: ಸುಭದ್ರ ಭಾರತ ನಿರ್ಮಣ ಮತ್ತು ದೇಶದಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ನರೇಂದ್ರ ಮೋದಿಜಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗುವುದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ ಹೇಳಿದರು.

ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ನಿಮಿತ್ಯ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.

‘ಜನಧನ್‌, ಆಯುಷ್ಮಾನ್‌ ಭಾರತ, ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಧಾನಿ ಮೋದೀಜಿ ಅವರು ದೇಶದ ಪ್ರಜೆಗಳಿಗೆ ನೀಡಿದ್ದು ಅಂಥಾ ಮಹಾನ ನಾಯಕರನ್ನು ಮತ್ತೆ ಪ್ರಧಾನಿ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಗಿದೆ ಎಂದ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಜಾ ಅಮರೇಶ್ವರ ನಾಯಕರನ್ನು ಮತ್ತೆ ಆರಿಸಿ ಕಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.

ADVERTISEMENT

ಸಭೆ ಉದ್ಘಾಟಿಸಿದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಈಗ ನಡೆಯುವ ಚುನಾವಣೆ ಇಡೀ ದೇಶದ ಭವಿಷ್ಯವನ್ನು ರೂಪಿಸುವ ಮಹಾ ಚುನಾವಣೆ. ದೇಶದ ಉಜ್ವಲ ಭವಿಷ್ಯದ ವಿಶಾಲವಾದ ದೃಷ್ಟಿಕೋನ ಇಟ್ಟುಕೊಂಡ ಚುನಾವಣೆ ಆಗಿದೆ. ರಾಯಚೂರ ಲೋಕಸಭಾ ಕ್ಷೇತ್ರದಲ್ಲಿ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಸುಮಾರು 34 ಸಾವಿರ ಕೋಟಿ ಅನುದಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಈ ಭಾಗದಲ್ಲಿ ಇನ್ನೂ ಅಭಿವೃದ್ಧಿಯ ಕಾರ್ಯಗಳು ಬಾಕಿ ಉಳಿದಿದ್ದು ಮತ್ತೊಮ್ಮೆ ಸಂಸತ್ ಭವನಕ್ಕೆ ನನ್ನನ್ನು ಆರಿಸಿ ಕಳಿಸಿ ಪ್ರಧಾನಿ ಮೋದೀಜಿ ಅವರ ಕೈಬಲಪಡಿಸುವ ಗುರುತರ ಜವಾಬ್ದಾರಿ ಪಕ್ಷದ ಎಲ್ಲ ಕಾರ್ಯಕರ್ತರ ಮೇಲಿದೆ ಎಂದರು.

ಮಂಡಲ ಅಧ್ಯಕ್ಷ ರಾಜುಗೌಡ ಉಕಿನಾಳ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಮಾತನಾಡಿದರು.

ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪೂರ, ಮುಖಂಡರಾದ ಬಸವರಾಜಗೌಡ ವಿಭೂತಿಹಳ್ಳಿ, ಗುರು ಕಾಮಾ, ಶಂಕರ ಕರಣಗಿ, ಮಲ್ಲಿಕಾರ್ಜುನ ಕಂದಕೂರ, ಕನಕಪ್ಪ ವಂದಗನೂರ, ರಾಜಶೇಖರ ಗೂಗಲ್, ಶಾಂತಣ್ಣ ಚನ್ನೂರ, ದೇವೇಂದ್ರ, ಸಂಗಣ್ಣ ತುಂಬಗಿ, ಯಲ್ಲಯ್ಯ ನಾಯಕ, ಶರಣಪ್ಪ ಯಾಳಗಿ, ರಮೇಶ ಕೊಡಗಾನೂರ, ಲಕ್ಷ್ಮೀಬಾಯಿ ಕಂಬಾರ ಸೇರಿದಂತೆ ಹಲವರು ಭಾಗವಹಿಸಿದ್ದರು. ಶರಣು ಮಂಡಗಳ್ಳಿ ಸ್ವಾಗತಿಸಿದರು, ರಮೇಶ ಜಾಧವ ನಿರೂಪಿಸಿ ವಂದಿಸಿದರು.

‘ಬಿ.ವಿ. ನಾಯಕ ಜೊತೆ ಭಿನ್ನಾಭಿಪ್ರಾಯವಿಲ್ಲ’
ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರದಂತೆ ರಾಯಚೂರು ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿದ್ದೇನೆ. ಮಾಜಿ ಶಾಸಕ ಬಿ. ವಿ. ನಾಯಕ ಅವರಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರ ಜೊತೆ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದು ನನ್ನ ಪರವಾಗಿ ಅವರೂ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ. ವಯೋಸಹಜದಿಂದ ಬಹುಶಃ ಇದು ನನ್ನ ಕೊನೆಯ ಚುನಾವಣೆ ಆಗಲಿದ್ದು ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರ ಶ್ರಮದಿಂದ ಈ ಬಾರಿ ನಾನು ಮತ್ತೆ ಸಂಸದನಾಗುವುದು ಖಚಿತ’ ಎಂದು ರಾಜಾ ಅಮರೇಶ್ವರ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.