ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ

ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಕಾಲಾವಕಾಶ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 11:54 IST
Last Updated 1 ಆಗಸ್ಟ್ 2019, 11:54 IST
ಎಂ.ಕೂರ್ಮಾ ರಾವ್
ಎಂ.ಕೂರ್ಮಾ ರಾವ್   

ಯಾದಗಿರಿ: ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಚುನಾವಣಾ ಆಯೋಗವು ವೇಳಾಪಟ್ಟಿ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದ್ದಾರೆ.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಪೂರ್ವ ಸಿದ್ಧತೆಯ ಭಾಗವಾಗಿ ಆಗಸ್ಟ್ 1ರಿಂದ 31ರವರೆಗೆ ಮತದಾರರ ಪಟ್ಟಿಯ ಸುಧಾರಣೆಗಾಗಿ ಅಭಿಯಾನ ನಡೆಸಲಾಗುತ್ತಿದೆ. ಸೆಪ್ಟೆಂಬರ್ 1ರಿಂದ 30ರವರೆಗೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‍ಒ)ಗಳು ಮತದಾರರ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 16ರಿಂದ ಅಕ್ಟೋಬರ್ 15ರವರೆಗೆ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಮತ್ತು ಭೌತಿಕ ಪರಿಶೀಲನೆ ನಡೆಯಲಿದೆ. ಪರಿಷ್ಕರಣೆ ಅಂಗವಾಗಿ ಅಕ್ಟೋಬರ್ 15ರಂದು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಮತದಾರರ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತದಾರರ ವಿಶೇಷ ನೋಂದಣಿ ಅಭಿಯಾನ ನವೆಂಬರ್ 2, 3, 9, ಮತ್ತು 10ರಂದು ನಡೆಸಲಾಗುವುದು. ಡಿಸೆಂಬರ್ 15ರೊಳಗೆ ಸೇರ್ಪಡೆ ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುತ್ತದೆ. ಡಿಸೆಂಬರ್ 25ರೊಳಗೆ ಅಂತಿಮ ಪಟ್ಟಿ ಪ್ರಕಟಿಸಲು ಆಯೋಗದ ಅನುಮತಿ ಪಡೆದು, ಡಿಸೆಂಬರ್ 31ರೊಳಗೆ ಪಟ್ಟಿ ಮುದ್ರಣಗೊಳ್ಳಲಿದೆ ಎಂದಿದ್ದಾರೆ.

ಹೊಸ ಮತದಾರರು ಯಾರು?:
ಜನವರಿ 1, 2020ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು. ಅರ್ಜಿಯನ್ನು ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಅವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ವಯಸ್ಸಿನ ದಾಖಲೆ, ವಿಳಾಸ, ಭಾವಚಿತ್ರ ಲಗತಿಸಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT