ವಡಗೇರಾ: ವಡಗೇರಾ ಪಟ್ಟಣದಲ್ಲಿ ಇರುವ ಪೊಲೀಸ್ ಠಾಣೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ ಅದನ್ನು ವಿಭಜಿಸಿ ಖಾನಾಪೂರ ಗ್ರಾಮದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು ಎಂಬ ಸಾರ್ವಜನಿಕರ ಕೂಗು ಕಳೆದ ಹದಿನೈದು ವರ್ಷಗಳಿಂದ ಇದೆ. ಆದರೆ ಅದು ಇದುವರೆಗೂ ಈಡೇರಿಲ್ಲ ಎಂಬ ಕೊರಗು ಜನರಲ್ಲಿ ಮನೆಮಾಡಿದೆ.
ಯಾದಗಿರಿ ಜಿಲ್ಲೆಯಲ್ಲಿಯೇ ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ ಠಾಣೆ ಎಂದರೆ ವಡಗೇರಾ ಪೊಲೀಸ್ ಠಾಣೆ.
ಸಿಬ್ಬಂದಿ: ಈ ಠಾಣೆಯಲ್ಲಿ ಇಬ್ಬರು ಪಿಎಸ್‌ಐ, 5 ಜನ ಎಎಸ್ಐ, 12 ಜನ ಹೆಡ್ ಕಾನ್‌ಸ್ಟೆಬಲ್, 22 ಜನ ಪೊಲೀಸ್ ಇದ್ದಾರೆ.
ವ್ಯಾಪ್ತಿ: ವಡಗೇರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 56 ಹಳ್ಳಿಗಳು, 6 ತಾಂಡಾಗಳು ಹಾಗೂ 2 ಬೀನ್ ಚಿರಾಗ್ (ಜನ ವಸತಿ ಇರದ ಪ್ರದೇಶಕ್ಕೆ ಪೊಲೀಸ್ ಇಲಾಖೆಯ ಭಾಷೆ) ಗ್ರಾಮಗಳು ಬರುತ್ತವೆ.
ವಿಸ್ತೀರ್ಣ: ಈ ಪೊಲೀಸ್ ಠಾಣೆಯ ಸರಹದ್ದು ಸಂಗಮದಿಂದ ಗುಂಡಳ್ಳಿ ತಾಂಡಾದ ಹತ್ತಿರವಿರುವ ಗಾಳಿ ಮರೆಮ್ಮ ದೇವಿ ದೇವಸ್ಥಾನದವರೆಗೆ ಇದೆ. ಈ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಸುಮಾರು 2 ಕಿ.ಮೀ.ನಿಂದ 35 ಕಿ.ಮೀ.ವರೆಗೆ ಇದೆ.
ಸಕಾಲದಲ್ಲಿ ತಲುಪಲು ಆಗಲ್ಲ: ವಡಗೇರಾ ಪಟ್ಟಣದಲ್ಲಿ ಇರುವ ಪೊಲೀಸರಿಗೆ ತಮ್ಮ ಸರಹದ್ದಿನಲ್ಲಿ ನಡೆದ ಅಪರಾಧ ಪ್ರಕರಣ ಇಲ್ಲವೇ ಅಪಘಾತ ಅಥವಾ ಗಲಭೆ ನಡೆದ ಸ್ಥಳಕ್ಕೆ ತಲುಪಬೇಕಾದರೆ ಸುಮಾರು 40 ರಿಂದ 60 ನಿಮಿಷ ಬೇಕು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಬಹಳ ತೊಂದರೆಯಾಗುತ್ತಿದೆ. ಅದಕ್ಕಾಗಿ ಈ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸಿ ಖಾನಾಪೂರದಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಕಾಲದಲ್ಲಿ ಘಟನೆ ನಡೆದ ಸ್ದಳಕ್ಕೆ ಪೊಲೀಸರು ತಲುಪಲು ಸಾಧ್ಯವಾಗುತ್ತದೆ ಎಂಬುದು ತಾಲ್ಲೂಕಿನ ವ್ಯಾಪ್ತಿಯ ಸಾರ್ವಜನಿಕರ ಅನಿಸಿಕೆಯಾಗಿದೆ.
ಹಿನ್ನೆಲೆ: ಸ್ವಾತಂತ್ರ್ಯಪೂರ್ವ ನಿಜಾಮರ ಆಳ್ವಿಕೆಯಲ್ಲಿ ಪಟ್ಟಣದ ಹನುಮಾನ ದೇವಸ್ಥಾನದ ಪಕ್ಕದಲ್ಲಿಯೆ ಇದ್ದ ಸೊಸೈಟಿಯಲ್ಲಿ ಪೊಲೀಸ್ ಠಾಣೆ ಆರಂಭಿಸಲಾಯಿತು. ಸ್ಥಳದ ಅಭಾವದಿಂದ ಅದನ್ನು ಖಾನಾಪೂರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಏಳೆಂಟು ವರ್ಷ ಕಾರ್ಯನಿರ್ವಹಿಸಿದ ನಂತರ 1964-65 ರಲ್ಲಿ ಸ್ವಂತ ಕಟ್ಟಡಕ್ಕೆ (ಈಗಿರುವ ಹಳೆಯ ಕಟ್ಟಡ) ಸ್ಥಳಾಂತರಿಸಲಾಯಿತು. ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ ಹೊಸದಾಗಿ ಕಟ್ಟಿರುವ ಕಟ್ಟಡದಲ್ಲಿ ಕಾರ್ಯ ನಿರ್ವಸುತ್ತಿದೆ.
ವಡಗೇರಾ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸುವ ಬಗ್ಗೆ ಗೃಹ ಮಂತ್ರಿಗಳ ಜತೆ ಚರ್ಚಿಸಲಾಗಿದೆ. ಖಾನಾಪೂರದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡುವ ಕಾರ್ಯ ಪ್ರಗತಿಯಲ್ಲಿ ಇದೆಚನ್ನಾರಡ್ಡಿ ಪಾಟೀಲ್ ತುನ್ನೂರ ಶಾಸಕ
ವಡಗೇರಾ ಪೊಲೀಸ್ ಠಾಣೆಯ ಸರಹದ್ದನ್ನು ವಿಭಜಿಸುವ ಅವಶ್ಯಕತೆ ಇದೆ. ಆದಷ್ಟು ಬೇಗ ಈ ಕಾರ್ಯ ನಡೆಯಬೇಕು. ಇದರಿಂದ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆಗುರು ನಾಟೇಕಾರ ತಾಲ್ಲೂಕು ಅಧ್ಯಕ್ಷ ಅಂಬೇಡ್ಕರ್ ವಾದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.