ADVERTISEMENT

ಹಿಂಗಾರು ಹಂಗಾಮಿಗೆ ನೀರು ಲಭ್ಯ: ರಾಜೂಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 6:08 IST
Last Updated 3 ಡಿಸೆಂಬರ್ 2021, 6:08 IST
ಸುರಪುರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಶಾಸಕ ರಾಜೂಗೌಡ ಉದ್ಘಾಟಿಸಿದರು. ಅಭ್ಯರ್ಥಿ ಬಿ.ಜಿ. ಪಾಟೀಲ, ಸುರೇಶ ಸಜ್ಜನ, ಯಲ್ಲಪ್ಪ ಕುರಕುಂದಿ, ಬಸನಗೌಡ ಯಡಿಯಾಪುರ, ಎಚ್.ಸಿ. ಪಾಟೀಲ ಇದ್ದರು
ಸುರಪುರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಶಾಸಕ ರಾಜೂಗೌಡ ಉದ್ಘಾಟಿಸಿದರು. ಅಭ್ಯರ್ಥಿ ಬಿ.ಜಿ. ಪಾಟೀಲ, ಸುರೇಶ ಸಜ್ಜನ, ಯಲ್ಲಪ್ಪ ಕುರಕುಂದಿ, ಬಸನಗೌಡ ಯಡಿಯಾಪುರ, ಎಚ್.ಸಿ. ಪಾಟೀಲ ಇದ್ದರು   

ಸುರಪುರ: ‘ಹಿಂಗಾರು ಹಂಗಾಮಿಗೆ ನೀರು ಬಿಡುವುದಿಲ್ಲ ಎಂಬ ಊಹಾಪೋಹ ಕೇಳಿಬಂದಿದ್ದವು. ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸುವಂತೆ ಮಾಡಿ ಮಾರ್ಚ್ 17 ರವರೆಗೆ ನೀರು ಕಾಲುವೆಗಳಿಗೆ ನೀರು ಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ದ್ದೇನೆ’ ಎಂದು ಶಾಸಕ ರಾಜೂಗೌಡ ಹೇಳಿದರು.

ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಪರ ಚುನವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಮತ್ತು ಜನಪರವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಗ್ರಾಮಗಳಿಗೆ ನೀರಿನ ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ಜಾರಿಗೊಳಿಸಿದ ಜಲಜೀವನ ಮಿಷನ್‍ನಡಿ ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತಿದೆ’ ಎಂದರು.

ADVERTISEMENT

‘ಯಾದಗಿರಿ ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಸಿಗಲಿ ಎಂಬ ಕಾರಣದಿಂದ ಜಲ ಜೀವನ ಮಿಷನ್ ಅಡಿಯಲ್ಲಿ ರಾಜ್ಯ ಸರ್ಕಾರ ₹ 1,200 ಕೋಟಿ ಅನುದಾನ ನೀಡಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲರೆಡ್ಡಿ ಮಾತನಾಡಿ, ‘ದಶಕಗಳ ಕಾಲ ಕಾಂಗ್ರೆಸ್ ದುರಾಡಳಿತ ನಡೆಸಿತು. 2014, 2019ರಲ್ಲಿ ನರೇಂದ್ರ ಮೊದಿ ಅವರಿಗೆ ದೇಶದ ಜನತೆ ಬಹುಮತ ಕೊಟ್ಟರು. ಇಂದು ಇಡೀ ವಿಶ್ವವೇ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಗೊಂಡು ಕೊಂಡಾಡುತ್ತಿವೆ. ದೇಶದಲ್ಲಿಯೇ ಎರಡು ಕೊರೊನಾ ಲಸಿಕೆ ಕಂಡುಹಿಡಿದು ದೇಶದ ನೂರು ಕೋಟಿಗೂ ಹೆಚ್ಚು ಜನರಿಗೆ ನೀಡಿ 84 ರಾಷ್ಟ್ರಗಳಿಗೆ ರಫ್ತು ಮಾಡಿರುವುದು ಹೆಮ್ಮೆಯ ವಿಷಯ’ ಎಂದರು.

ಅಭ್ಯರ್ಥಿ ಬಿ.ಜಿ. ಪಾಟೀಲ ಮಾತ ನಾಡಿ, ‘ನಮಗೆ ಸಾಕಷ್ಟು ಅನುದಾನ ಇರುವುದಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಕಳೆದ 6 ವರ್ಷ ಆದಷ್ಟು ಅಭಿವೃದ್ಧಿ ಕೆಲಸ ಮಾಡಿರುವೆ. ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಅವಶ್ಯಕತೆಯಿದೆ. ಈ ಚುನಾವಣೆ 2023ರ ವಿಧಾನಸಭೆ ಚುನಾವಣೆಗೆ ಭದ್ರ ಬುನಾದಿ’ ಎಂದರು .

ಸುರೇಶ ಸಜ್ಜನ್, ಎಚ್.ಸಿ.ಪಾಟೀಲ್, ಯಲ್ಲಪ್ಪ ಕುರುಕುಂದಿ, ಬಸನಗೌಡ ಯಡಿಯಾಪುರ, ಮರಲಿಂಗಪ್ಪನಾಯಕ ಕರ್ನಾಳ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲನಾಯಕ ಜೇವರ್ಗಿ, ಉಪಾಧ್ಯಕ್ಷ ಮಹೇಶ ಪಾಟೀಲ, ರಾಜಾ ಹನುಮಪ್ಪನಾಯಕ, ಗುರು ಕಾಮಾ, ದುರ್ಗಪ್ಪ ಗೋಗಿಕರ್, ದೇವಿಂದ್ರನಾಥ ನಾದ, ಕಿಶೋರಚಂದ ಜೈನ್, ಪ್ರಕಾಶ ಸಜ್ಜನ್, ದೊಡ್ಡ ದೇಸಾಯಿ, ವೇಣುಮಾಧವನಾಯಕ, ಭೀಮಾಶಂಕರ ಬಿಲ್ಲವ್ ಇತರರಿದ್ದರು.
ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಅಮರಯ್ಯಸ್ವಾಮಿ ಜಾಲಿಬೆಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.