ADVERTISEMENT

ಕಾಲುವೆಗೆ ನೀರು: ಕೃಷಿ ಚಟುವಟಿಕೆ ಜೋರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 17:35 IST
Last Updated 20 ಜುಲೈ 2020, 17:35 IST
ಶಹಾಪುರ ತಾಲ್ಲೂಕಿನ ಕೊಂಗಂಡಿ ಬಳಿ ಭತ್ತ ನಾಟಿಗೆ ಸಿದ್ಧಪಡಿಸಿದ ಸಸಿ
ಶಹಾಪುರ ತಾಲ್ಲೂಕಿನ ಕೊಂಗಂಡಿ ಬಳಿ ಭತ್ತ ನಾಟಿಗೆ ಸಿದ್ಧಪಡಿಸಿದ ಸಸಿ   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಮಂಗಳವಾರ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಮೂಲಕ ಹರಿಸಲಾಗುತ್ತಿದೆ. ಪ್ರಸಕ್ತ ಬಾರಿ ಉತ್ತಮ ಮಳೆಯಿಂದ ಹರ್ಷಚಿತ್ತರಾಗಿರುವ ರೈತರಿಗೆ ಕಾಲುವೆ ನೀರು ಮತ್ತಷ್ಟು ಇಮ್ಮಡಿಗೊಳಿಸಿದೆ. ಥೇಟ್ ಮಲೆನಾಡಿನ ಸೊಬಗು ಇಲ್ಲಿ ಆರಂಭವಾಗಿದೆ ಎನ್ನುತ್ತಾರೆ ರೈತ ಮುಖಂಡ ಹಣಮಂತರಾಯ ದೊರೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೆಪ ಮಾತ್ರಕ್ಕೆ ಭತ್ತ ನಿಷೇಧಿತ ಬೆಳೆಯಾಗಿದೆ. ಆದರೆ ಕಾಲುವೆ ಮೇಲ್ಭಾಗದ ಹಾಗೂ ಸಮೃದ್ಧಿಯಾಗಿ ನೀರು ಪಡೆಯುವ ರೈತರು ಅಲ್ಲದೆ ಹಳ್ಳ ಮತ್ತು ಎಸ್ಕೇಪ್ ಗೇಟಿನಿಂದ ಹೆಚ್ಚುವರಿ ನೀರು ಹರಿದು ಬರುವ ಜಮೀನುಗಳು ಭತ್ತ ಬೆಳೆಯನ್ನು ನೆಚ್ಚಿಕೊಂಡಿವೆ. ಭತ್ತ ಬೆಳೆಯನ್ನು ಬಿಟ್ಟು ಬೇರೆ ಬೆಳೆಯನ್ನು ಬೆಳೆಯಲಾರದ ಮಟ್ಟಕ್ಕೆ ನಾವೀಗ ಬಂದು ನಿಂತಿದ್ದೇವೆ. ನಿಷೇಧಿತ ಬೆಳೆ ನಿಗಮದ ದಾಖಲೆಯ ಕಡತದಲ್ಲಿ ಉಳಿದುಕೊಂಡಿದೆ ಎನ್ನುತ್ತಾರೆ ಭತ್ತ ಬೆಳೆಯುವ ರೈತರು.

ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆ ಉತ್ತಮ ಮಳೆಯಾದಾಗ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೆಚ್ಚುವರಿ ನೀರು ನದಿಗೆ ಹರಿಸುವ ಬದಲು ಕಾಲುವೆಗೆ ಹರಿಸಿದ್ದರೆ ಅನುಕೂಲವಾಗುತ್ತಿತ್ತು. ಈಗಾಗಲೇ ಗದ್ದೆಯಲ್ಲಿ ಸಿದ್ಧಪಡಿಸಿದ ಸಸಿಯು 25ರಿಂದ30 ದಿನ ಆಗಿವೆ. ಹಳ್ಳ, ಕೆರೆ, ಕೊಳವೆಬಾವಿಯ ನೀರಿನ ಲಭ್ಯತೆ ಇರುವ ರೈತರು ಮತ್ತು ನದಿ ದಂಡೆಯ ರೈತರು ಭತ್ತ ನಾಟಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.