ADVERTISEMENT

ಉದ್ಯೋಗ ಬಿಟ್ಟು ಬಂದವರೇ ಹೆಚ್ಚು...

ಆಯ್ಕೆಯಾದವರಲ್ಲಿ ಶೇ20ರಷ್ಟು ಜನ ಉದ್ಯೋಗದಲ್ಲಿ!

ಬಿ.ಜಿ.ಪ್ರವೀಣಕುಮಾರ
Published 22 ಡಿಸೆಂಬರ್ 2019, 14:35 IST
Last Updated 22 ಡಿಸೆಂಬರ್ 2019, 14:35 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಈಚೆಗೆ ನಡೆದ ಉದ್ಯೋಗ ಮೇಳ
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಈಚೆಗೆ ನಡೆದ ಉದ್ಯೋಗ ಮೇಳ   

ಯಾದಗಿರಿ: ಜಿಲ್ಲಾ ಉದ್ಯೋಗ ಮಿನಿಮಯ ಕಚೇರಿಯಲ್ಲಿ ನಾಲ್ಕು ವರ್ಷಗಳಲ್ಲಿ ಪುರುಷ, ಮಹಿಳೆ ಸೇರಿ 1,477 ಮಂದಿ ಉದ್ಯೋಗ ಮೇಳದಲ್ಲಿ ಆಯ್ಕೆಯಾಗಿದ್ದು, ಇವರಲ್ಲಿ ಶೇಕಡ 20ರಷ್ಟು ಮಾತ್ರ ಉದ್ಯೋಗ ಮಾಡುತ್ತಾರೆ.

ಉದ್ಯೋಗಕ್ಕೆ ಸೇರಿಸಿಕೊಳ್ಳುವ ಕಂಪನಿಗೆ ಮೊದಲು ಶುಲ್ಕ ತುಂಬಿ ನಂತರ ಅದರಲ್ಲಿ ಪ್ರವೇಶ ಪಡೆಯಬೇಕಿದೆ. ಹೀಗಾಗಿಆಯ್ಕೆಯಾದ ಅಭ್ಯರ್ಥಿಗಳು ಕಂಪನಿಗಳಲ್ಲಿ ಕೆಲಸ ಮಾಡದೆ ಹಿಂತಿರುಗುವುದರಿಂದ ನಿರುದ್ಯೋಗ ಸಮಸ್ಯೆ ಹಾಗೆಯೇ ಇದೆ.

ಉದ್ಯೋಗ ಗಿಟ್ಟಿಸಿಕೊಂಡರೂ ಅದನ್ನು ಮಾಡಲಾರದೆ ಬಿಟ್ಟು ಬರುವು ದರಿಂದ ಜಿಲ್ಲೆಯಲ್ಲಿ ನಿರುದ್ಯೋಗಿಗಳ ಪ್ರಮಾಣ ಮತ್ತಷ್ಟು ಹೆಚ್ಚಿದೆ.

ADVERTISEMENT

‘ಇಲ್ಲಿಂದ ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ ಮೂರು ತಿಂಗಳು ಒಂದು ಕಂಪನಿಯಲ್ಲಿ ಕೆಲಸ ನಿರ್ಹವಹಿಸಬೇಕು. ನಂತರ ಅವರಿಗೆ ಸಂಬಳ ಮತ್ತಿತರರ ಸೌಲಭ್ಯಗಳನ್ನು ಕಂಪನಿ ಕಲ್ಪಿಸುತ್ತದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾದ ಅಭ್ಯರ್ಥಿಗಳು ಒಂದು ತಿಂಗಳು ಕೆಲಸ ಮಾಡದೆ ಅಲ್ಲಿಂದ ಬರುವುದರಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ವಿದ್ಯಾವಂತರೇನೂ ಸಾಕಷ್ಟು ಮಂದಿ ಇದ್ದು, ಉದ್ಯೋಗಗಳಿಗೂ ಕೊರತೆ ಇಲ್ಲ. ಆದರೆ, ಜಿಲ್ಲೆಯಲ್ಲಿ ಕೌಶಲ ಪಡೆದಿರುವವರ ಕೊರತೆ ಎದ್ದು ಕಾಣುತ್ತದೆ. ಹೀಗಾಗಿ ಕಂಪನಿಗಳವರು ಆಯ್ಕೆ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗುತ್ತಿಲ್ಲ’ ಎನ್ನುತ್ತಾರೆ ಜಿಲ್ಲಾ ಉದ್ಯೋಗಾಧಿಕಾರಿ ಭಾರತಿ.

ಉದ್ಯೋಗ ನೀಡಲು ಮುಖ್ಯವಾಗಿ ಕ್ಯಾಪ್ಸ್‌ಟನ್‌, ಸ್ವಿಗ್ಗಿ, ಜೊಮೊಟೊ, ಫ್ಲಿಕ್‌ಕಾರ್ಟ್‌, ಫುಲ್‌ಟರ್ನ್‌ ಇಂಡಿಯಾ, ಸನ್‌ಬಿಜ್‌ ಸೆಲುಷನ್ ಮುಂತಾದ ಕಂಪನಿಗಳು ಬರುತ್ತಿವೆ. ಮೇಳದಲ್ಲಿ ಆಯ್ಕೆಯಾಗಿ ಪಟ್ಟಣಗಳಿಗೆ ಹೋದವರು ಸೌಲಭ್ಯಗಳು ಸಿಗದೆ ಕೆಲಸ ಬಿಟ್ಟು ಬರುತ್ತಿದ್ದಾರೆ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಾದಅಯ್ಯಪ್ಪ, ಗುರುರಾಜ, ಭೀಮಣ್ಣ ಮುಂತಾದವರು ಹೈದರಾಬಾದ್‌ಗೆ ತೆರಳಿದರೂ ಸೂಕ್ತ ಸೌಲಭ್ಯ ಇಲ್ಲದಿದ್ದರಿಂದ ಬಿಟ್ಟು ಬಂದಿದ್ದಾರೆ. ಅಲ್ಲದೆ ಉದ್ಯೋಗ ಮೇಳದಲ್ಲಿ ₹15,000 ಸಾವಿರ ವೇತನ ಎಂದು ಹೇಳಿ ಅಲ್ಲಿಗೆ ತೆರಳಿದ ನಂತರ ₹12,000 ಸಾವಿರಮಾತ್ರಎಂದು ಹೇಳಿದ್ದಾರೆ. ಹೀಗಾಗಿ ರೂಂ ಬಾಡಿಗೆ ಭರಿಸಲು ಆಗದೆ ಬಿಟ್ಟು ಬಂದಿದ್ದಾರೆ.

ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಟೆಕ್ಸ್‌ಟೈಲ್‌ ಕಾರ್ಖಾನೆ ಆರಂಭವಾಗದ ಕಾರಣ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಇಲ್ಲದಂತಾಗಿದೆ. ಅಲ್ಲದೆ ಕಡೇಚೂರು–ಬಾಡಿಯಾಳ ಬಳಿ ಕೈಗಾರಿಕೆ ವಲಯ ಸ್ಥಾಪನೆಯಾಗದ ಕಾರಣ ಇಲ್ಲಿಯೂ ಸ್ಥಳೀಯವಾಗಿ ಉದ್ಯೋಗ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.