ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಸಿಡಿಲಿಗೆ 10 ಜನ ಬಲಿ

ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ರೈತರೇ ಹೆಚ್ಚು ಸಾವು, ಸಿಡಿಲಿನ ಮುನ್ನಚ್ಚರಿಕೆಗೆ ಸೂಚನೆ

ಬಿ.ಜಿ.ಪ್ರವೀಣಕುಮಾರ
Published 30 ಸೆಪ್ಟೆಂಬರ್ 2022, 2:02 IST
Last Updated 30 ಸೆಪ್ಟೆಂಬರ್ 2022, 2:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಯಾದಗಿರಿ: ಜಿಲ್ಲೆಯಲ್ಲಿ ಈ ವರ್ಷದ ಜೂನ್‌ ತಿಂಗಳಿಂದ ಸೆಪ್ಟೆಂಬರ್ 29ರ ವರೆಗೆ ಸಿಡಿಲಿಗೆ 10 ಜನರು ಬಲಿಯಾಗಿದ್ದಾರೆ. ಇದರಲ್ಲಿ ರೈತರ ಸಂಖ್ಯೆ ಹೆಚ್ಚಿದೆ.

ಮುಂಗಾರು ಮುನ್ನವೇ ಮೂವರು ಸಾವನಪ್ಪಿದ್ದರೆ, ಆನಂತರ ಇಬ್ಬರು, ಸೆಪ್ಟೆಂಬರ್‌ 28, 29ರ ಒಂದೇ ದಿನದ ಅಂತರದಲ್ಲಿ 5 ಜನರು ಸಿಡಿಲಿಗೆ ಬಲಿಯಾಗಿದ್ದಾರೆ.

ಎಲ್ಲೆಲ್ಲಿ ಎಷ್ಟು ಸಾವು: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಕೆಲ ದಿನಗಳು ಗುಡುಗು ಸಿಡಿಲಿ ನೊಂದಿಗೆ ಮಳೆಯಾಗಿದೆ. ಅಂಥ ದಿನಗಳಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಬಹುತೇಕರು ಪ್ರಾಣ ಕಳೆದುಕೊಂಡಿದ್ದಾರೆ.

ADVERTISEMENT

ಸುರಪುರ, ಗುರುಮಠಕಲ್‌ ತಾಲ್ಲೂಕಿನವರು ತಲಾ ಮೂವರು, ಯಾದಗಿರಿ ತಾಲ್ಲೂಕಿನಲ್ಲಿ ಇಬ್ಬರು, ಹುಣಸಗಿ, ವಡಗೇರಾ ತಾಲ್ಲೂಕಿನ ತಲಾ ಒಬ್ಬೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

₹5 ಲಕ್ಷ ಪರಿಹಾರ: ಸಿಡಿಲಿಗೆ ಬಲಿಯಾದ ಕುಟುಂಬಕ್ಕೆ ಪ್ರಕೃತಿ ವಿಕೋಪ‍ದಡಿಯಲ್ಲಿ ಸರ್ಕಾರ ₹5 ಲಕ್ಷ ಪರಿಹಾರ ಧನ ನೀಡಲಾಗುತ್ತಿದೆ. ಇನ್ನೂ ಸಿಡಿಲಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಗಾಯಕ್ಕೆ ತಕ್ಕಂತೆ ಪರಿಹಾರ ಧನ ನೀಡಲಾಗುತ್ತಿದೆ.

2019ರಲ್ಲೂ 9 ಜನ ಬಲಿ: ಇನ್ನೂ 2019ರಲ್ಲಿಯೂ ಸಿಡಿಲಿಗೆ ಜಿಲ್ಲೆಯಲ್ಲಿ 9 ಜನ ಸಾವನ್ನಪ್ಪಿದ್ದಾರೆ.ಶಹಾಪುರ ತಾಲ್ಲೂಕಿನ ಒಬ್ಬರು, ಗುರುಮಠಕಲ್‌ ತಾಲ್ಲೂಕಿನಲ್ಲಿ ಇಬ್ಬರು, ಯಾದಗಿರಿ ತಾಲ್ಲೂಕಿನಲ್ಲಿ ಮೂವರು, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 4 ಜನ ಸಿಡಿಲಿಗೆ ಬಲಿಯಾಗಿದ್ದಾರೆ.

ಶಹಾಪುರ ತಾಲ್ಲೂಕಿನ ರಸ್ತಾಪುರ, ಗುರುಮಠಕಲ್‌ ತಾಲ್ಲೂಕಿನ ಮಾಧ್ವರ, ಕೋಟಗೇರಾ, ಯಾದಗಿರಿ ತಾಲ್ಲೂಕಿನ ಸುತಾರ ಹೊಸಳ್ಳಿ, ಹೊನಗೇರಾ, ಕೌಳೂರು, ಸುರಪುರ ತಾಲ್ಲೂಕಿನ ಯರಿಕಹಾಳ, ನಗನೂರ, ಹುಣಸಗಿ ತಾಲ್ಲೂಕಿನ ಕೋಡೆಕಲ್ ಗ್ರಾಮಸ್ಥರು ಸಿಡಿಲಿಗೆ ಬಲಿಯಾಗಿದ್ದರು.

ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ?: ಮಳೆಗಾಲದಲ್ಲಿ ಸಿಡಿಲನ್ನು ತಪ್ಪಿಸಿಕೊಳ್ಳಲಾಗದು. ಆದರೆ, ಆದರಿಂದಾಗುವ ಸಾವು ನೋವುಗಳನ್ನು ತಪ್ಪಿಸಬಹುದು ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ತಕ್ಷಣ ಬಯಲಿನಲ್ಲಿದ್ದರೆ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತು ಕೊಳ್ಳಬೇಕು. ನಿಲ್ಲಬಾರದು ಎಂದು ಸಲಹೆ ನೀಡುತ್ತಾರೆ.

ಮಳೆ ಬಂದಾಗ ಸಹಜವಾಗಿ ಮರಗಳ ಆಶ್ರಯ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಮರಗ ಳಿದ್ದ ಪ್ರದೇಶದಲ್ಲಿ ಎಷ್ಟು ಮಾತ್ರವೂ ಇರಬಾರದು. ಸಿಡಿಲು ವಿದ್ಯುತ್‌, ನೀರಿನಾಂಶ ಸೇರಿ ಸಿಡಿಲ ಬಡಿಯುತ್ತದೆ. ಸಿಡಿಲು 30 ಸಾವಿರ ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಹೊಂದಿರುತ್ತದೆ.ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂಥ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಹೀಗಾಗಿ ಅಲ್ಲಿರು ವುದು ಎಷ್ಟು ಮಾತ್ರ ವೂ ಸೂಕ್ತವಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಆಬಿದ್‌ ಎಸ್‌.ಎಸ್‌. ಹೇಳಿದರು.

‘ದಾಮಿನಿ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ
ಸಾರ್ವಜನಿಕರು ಸಿಡಿಲು ಅಥವಾ ಮಿಂಚಿನ ಮುನ್ಸೂಚನೆ ತಿಳಿದುಕೊಳ್ಳಲು ಕೇಂದ್ರ ಸರ್ಕಾರ ಭೂವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ‘ದಾಮನಿ’ ಎನ್ನುವ ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಿದೆ ಎಂದುಕವಡಿಮಟ್ಟಿ ಕೃಷಿ ಹವಾಮಾನ ಶಾಸ್ತ್ರ ವಿಷಯ ತಜ್ಞೆ ಡಾ.ಶಿಲ್ಪಾ ವಿ ಹೇಳುತ್ತಾರೆ.

ಈ ಆ್ಯಪ್‌ ಸಿಡಿಲಿನ ಹೊಡೆತಗಳ ನಿಖರವಾದ ಸ್ಥಳಗಳನ್ನು ಗುರುತಿಸುತ್ತದೆ. ನಮ್ಮ ಸುತ್ತಲಿನ 20 ರಿಂದ 40 ಚದರ ಕಿ.ಮೀ.ವರೆಗೆ ಸಂಭವನೀಯ ಗುಡುಗು ಸಹಿತ ಮಿಂಚಿನ ಚಲನೆ ಬಗ್ಗೆ ಕನಿಷ್ಠ 15 ರಿಂದ 20 ನಿಮಿಷ ಮೊದಲು ಎಚ್ಚರಿಕೆ ನೀಡುತ್ತದೆ. ಸ್ಮಾರ್ಟ್ ಫೋನ್ ಉಪಯೋಗಿಸುವ ರೈತರು ಪ್ಲೇಸ್ಟೋರ್‌ನಲ್ಲಿ ‘ದಾಮಿನಿ’ ಎಂದು ಟೈಪ್ ಮಾಡಿ ಆ್ಯಪ್‌ ಡೌನ್ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಪಿನ್ ಕೋಡ್, ಉದ್ಯೋಗ ನಮೂದಿಸಿ ನೋಂದಾಯಿಸಿಕೊಳ್ಳಬೇಕು. ನಂತರ ನೋಂದಾಯಿತ ಬಳಕೆದಾರರು ಆಯಾ ಪ್ರದೇಶದ ಮಿಂಚಿನ ಮುನ್ಸೂಚನೆ ಮತ್ತು ಎಚ್ಚರಿಕೆಯ ಮಾಹಿತಿ ಪಡೆಯಬಹುದಾಗಿದೆ‘ ಎಂದು ತಿಳಿಸುತ್ತಾರೆ.

***

ರೈತರು ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಆಶ್ರಯ ಪಡೆಯಬಾರದು. ಮಳೆಯಿಂದ ನೆನೆದರೂ ಪರವಾಗಿಲ್ಲ. ಅಲ್ಲಿಂದ ಹೊರಬರಬೇಕು. ಪ‍್ರಾಣಿಗಳ ಜೊತೆ ಇದ್ದಾಗ ಕುಳಿತುಕೊಳ್ಳಬೇಕು. ಗುಡುಗು ಇದ್ದಾಗ ಮೊಬೈಲ್ ಬಳಕೆ ಮಾಡಬಾರದು.
–ಆಬಿದ್‌ ಎಸ್‌.ಎಸ್‌., ಜಂಟಿ ಕೃಷಿ ನಿರ್ದೇಶಕ

***

ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಬಯಲು ಪ್ರದೇಶದಲ್ಲಿ ಸಿಡಿಲು ಹೆಚ್ಚು ಆವರಿಸುತ್ತದೆ. ಗುಡುಗು ಸಿಡಿಲು ಇರುವ ಕಡೆ ಜನರು ತಗ್ಗು ಪ್ರದೇಶಗಳಲ್ಲಿರಬೇಕು. ಎತ್ತರದಲ್ಲಿದ್ದರೆ ಸಿಡಿಲು ಬೀಳುವ ಸಂಭವ ಇರುತ್ತದೆ.
ಡಾ.ಶಿಲ್ಪಾ ವಿ, ಕೃಷಿ ಹವಾಮಾನ ಶಾಸ್ತ್ರ ವಿಷಯ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.