ADVERTISEMENT

ಯಾದಗಿರಿ: ಸರ್ವೇ ಕಾರ್ಯ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸೂಚನೆ

ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 15:08 IST
Last Updated 25 ಅಕ್ಟೋಬರ್ 2021, 15:08 IST
ಡಾ. ರಾಗಪ್ರಿಯಾ ಆರ್.
ಡಾ. ರಾಗಪ್ರಿಯಾ ಆರ್.   

ಯಾದಗಿರಿ: ಜಿಲ್ಲೆಯಲ್ಲಿ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಇಲಾಖೆಯ ಹಾಗೂ ನೋಂದಾಯಿತ ಸರ್ವೇಯರ್‌ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ ನಂತರ, ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ಅವರು ತಿಳಿಸಿದರು.

ADVERTISEMENT

ಪ್ರತಿ 15 ದಿವಸಕ್ಕೊಮ್ಮೆ ತಾಲ್ಲೂಕು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕಡ್ಡಾಯವಾಗಿ ಮಾಡಬೇಕು. ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಅಕ್ಟೋಬರ್- 2021 ರ ತಿಂಗಳಿಗೆ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ಕೋವಿಡ್- 19 ಹರಡುತ್ತಿರುವ ಕಾರಣದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ಹೊಸ ಪಡಿತರ ಅರ್ಜಿಗಳಿಗೆ ಬಿಡುಗಡೆಯಾದ ಪಡಿತರ ಧಾನ್ಯವನ್ನು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ 35 ಕೆ.ಜಿ ಅಕ್ಕಿ, ಬಿಪಿಎಲ್ ಪಡಿತರ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಾಗೂ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ (ಪಿಎಂಜಿಕೆಎವೈ) 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಮತ್ತು ಎಪಿಎಲ್ ಪಡಿತರ ಏಕವ್ಯಕ್ತಿ ಚೀಟಿಗೆ 5 ಕೆಜಿ, ಎರಡಕ್ಕಿಂತ ಹೆಚ್ಚಿನ ಕುಟುಂಬದ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿ ಅಕ್ಕಿಯನ್ನು ₹15 ರಂತೆ ನೀಡಲಾಗುತ್ತಿದೆ. ಅಕ್ಟೋಬರ್-2021 ರ ತಿಂಗಳಿಗೆ ಎನ್‌ಎಫ್‌ಎಸ್‌ಎ ಯೋಜನೆಯಡಿ ಜಿಲ್ಲೆಗೆ 4821.121 ಮೆಟ್ರಿಕ್ ಟನ್ ಅಕ್ಕಿ, 467.608 ಮೆಟ್ರಿಕ್ ಟನ್ ಗೋಧಿ ಹಂಚಿಕೆಯಾಗಿದೆ. ಪಿಎಂಜಿಕೆಎವೈ ಯೋಜನೆಯಡಿ ಜಿಲ್ಲೆಗೆ 4,540 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆಯಾಗಿದ್ದು, ಶೇಕಡ 100 ರಷ್ಟು ಎತ್ತುವಳಿಯಾಗಿರುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಜೂನ್ 1 ರಿಂದ ಅಕ್ಟೋಬರ್ 22 ರ ವರೆಗೆ ಮಳೆಯಿಂದಾಗಿ ಶಹಾಪುರ ತಾಲ್ಲೂಕಿನಲ್ಲಿ 60 ಮನೆ ಹಾನಿ ಅಂದಾಜು ₹12 ಲಕ್ಷ ಹಾನಿ, ವಡಗೇರಾ ತಾಲ್ಲೂಕಿನಲ್ಲಿ 126 ಮನೆ ₹25.20 ಲಕ್ಷ, ಯಾದಗಿರಿ ತಾಲ್ಲೂಕು 51 ಮನೆ ₹10.20 ಲಕ್ಷ, ಗುರುಮಠಕಲ್ ತಾಲ್ಲೂಕು 46 ಮನೆ ₹9.20 ಲಕ್ಷ, ಸುರಪುರ ತಾಲ್ಲೂಕು 113 ಮನೆ ₹22.60 ಲಕ್ಷ, ಹುಣಸಗಿ ತಾಲ್ಲೂಕು 288 ಮನೆ ₹9.20 ಲಕ್ಷ ಅಂದಾಜು ಹಾನಿ ಜಿಲ್ಲೆಯಲ್ಲಿ ಒಟ್ಟು ₹57.60 ಲಕ್ಷ ಅಂದಾಜು ಹಾನಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಕಂದಾಯ ಇಲಾಖಾಧಿಕಾರಿಗಳು ಇದ್ದರು.

ಲಸಿಕಾ ಮೇಳದ ಯಶಸ್ವಿಗೆ ಶ್ರಮಿಸಿ

ಪ್ರತಿ ಪ್ರಾಥಮಿಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾಕರಣ ನಡೆಯಲಿದೆ. ಲಸಿಕಾಮೇಳಕ್ಕೆ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಜನರನ್ನು ಲಸಿಕಾ ಕೇಂದ್ರಕ್ಕೆ ಕರೆತರಲು ಮತ್ತು ಲಸಿಕೆಗಳ ಕೊರತೆಯಾಗದಂತೆ ಉತ್ತಮ ರೀತಿಯಲ್ಲಿ ಸರಬರಾಜು ಮಾಡುವಂತೆ ಲಸಿಕಾಕರಣ ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿದೆ. ಹೀಗಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಹಶೀಲ್ದಾರ್‌ ತಾಲ್ಲೂಕುವಾರು ನಿಯೋಜಿತ ತಂಡಗಳಿಗೆ ಪೂರ್ವ ತಯಾರಿ ಸಭೆ ನಡೆಸುವಂತೆ ಸಲಹೆ ನೀಡಿ ಕಡ್ಡಾಯವಾಗಿ ಡಾಟಾ ಎಂಟ್ರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.