ADVERTISEMENT

ಯಾದಗಿರಿ: ಕಾರ್ಮಿಕರ ಸಮಸ್ಯೆ ಬಗೆಹರಿಸಲು ಒತ್ತಾಯ

ಸಹಾಯಧನಕ್ಕಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಗೆ ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 4:01 IST
Last Updated 4 ಸೆಪ್ಟೆಂಬರ್ 2021, 4:01 IST
ಎಐಯುಟಿಯುಸಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು
ಎಐಯುಟಿಯುಸಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಲಾಕ್‌ಡೌನ್ ಪರಿಹಾರ ಧನ ಖಾತ್ರಿಪಡಿಸಲು, ಕ್ಲೇಮ್‍ಗಳ ವಿಳಂಬದ ಸಮಸ್ಯೆ ಇನ್ನಿತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಎಐಯುಟಿಯುಸಿಗೆ ಸಂಯೋಜಿತವಾಗಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.

ಲಾಕ್‍ಡೌನ್ ಪರಿಹಾರ ಧನ ₹3,000 ಮತ್ತು ಕಳೆದ ಬಾರಿಯ ₹5,000 ಬಾರದೇ ಇರುವ ಕಟ್ಟಡ ಕಾರ್ಮಿಕರಿಗೆ ವಿಳಂಬ ಮಾಡದೇ ಪಾವತಿಸಬೇಕು. ಲಸಿಕೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮಂಡಳಿಯು ₹310 ಕೋಟಿ ಹಣ ಕೊಡುವುದನ್ನು ರದ್ದು ಮಾಡಬೇಕು. ಸಹಾಯಧನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.

ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು ಹಾಗೂ ಕೋವಿಡ್-19 ಸಾವಿಗೀಡಾದ ಕಾರ್ಮಿಕನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೊರೊನಾ ಹೋಗಲಾಡಿಸಲು ಲಾಕ್‌ಡೌನ್ ಜಾರಿಯಿಂದಾಗಿ ಹೆಚ್ಚು ಬಾಧೆಗೆ ಒಳಗಾಗಿರುವವರು ಕಟ್ಟಡ ಕಾರ್ಮಿಕರು. ಲಾಕಡೌನ್ ಅವಧಿಯ ನಂತರದಿಂದ ಇಂದಿನವರೆಗೂ ಕಾರ್ಮಿಕರು, ಜನಸಾಮಾನ್ಯರು ಮತ್ತೆ ಸಹಜ ಸ್ಥಿತಿಗೆ ಮರಳುವುದಕ್ಕೆ ಕಷ್ಟಪಡುತ್ತಿದ್ದಾರೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಜೀವನ ನಡೆಸುವುದು ದುರ್ಬರವಾಗುತ್ತಿದೆ ಎಂದರು.

ಅಲ್ಲದೇ ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡಲು ಮಂಡಳಿಯಿಂದ, ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಲಸಿಕೆ ₹780 ರಂತೆ ₹40 ಲಕ್ಷ ಕಾರ್ಮಿಕರಿಗೆ ₹312 ಕೋಟಿ ಧಾರೆ ಎರೆಯಲು ನಿರ್ಧರಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಸೆಪ್ಟೆಂಬರ್ 2 ರಿಂದ ಆರಂಭಗೊಳ್ಳಲಿದೆ ಎಂದು ಮಂಡಳಿಯು ಘೋಷಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟದೆ. ಈಗಾಗಲೇ ಎಲ್ಲೆಡೆ ಸಾರ್ವತ್ರಿಕಾ ಲಸಿಕಾ ಅಭಿಯಾನ ನಡೆಯುತ್ತಿದ್ದು, ಖಾಸಗಿಯವರಿಗೆ ಲಾಭ ಮಾಡಿಕೊಡಲು ಮಂಡಳಿಯು ಮುಂದಾಗಿದೆಯೆಂಬ ಅನುಮಾನಗಳು ಮೂಡುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಕಲ್ಯಾಣ ಮಂಡಳಿ ಹಣವೇಕೆ? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ನಂತರ ಜಿಲ್ಲಾ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಡಿ. ಉಮಾದೇವಿ, ಸಂಘದ ಜಿಲ್ಲಾ ಸಂಚಾಲಕ ರಾಮಲಿಂಗಪ್ಪ ಬಿ.ಎನ್, ಕಾರ್ಮಿಕರಾದ ಲಕ್ಷ್ಮೀ, ಮರೆಮ್ಮ, ಮಹಾದೇವಿ, ಅಶೋಕ, ಮಲ್ಲೇಶ್, ಬಸವರಾಜ, ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.