ADVERTISEMENT

ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ

ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು, ಶೇ 20 ರಷ್ಟು ಭಾಗವಹಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2022, 16:30 IST
Last Updated 16 ಮೇ 2022, 16:30 IST
ಯಾದಗಿರಿ ನಗರದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು
ಯಾದಗಿರಿ ನಗರದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು   

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ (ಮೇ 16)ದಿಂದ ಶಾಲೆ ಆರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಗೆ ಆಗಮಿಸಿರುವುದು ಕಂಡು ಬಂದಿತು.

ಜಿಲ್ಲೆಯಲ್ಲಿ 925 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. 122 ಪ್ರೌಢಶಾಲೆಗಳಿವೆ. 300 ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ.

ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮಕ್ಕಳ ಕಲರವ ಕಂಡು ಬಂದಿತು. ಶಾಲಾ ಸಮವಸ್ತ್ರ ಧರಿಸಿ ಮಕ್ಕಳು ಉತ್ಸಾಹದಿಂದ ಆವರಣದೊಳಗೆ ಬಂದಿರುವುದು ಕಂಡು ಬಂದಿತು.

ADVERTISEMENT

ನಗರ ಸೇರಿದಂತೆ ಜಿಲ್ಲಾದ್ಯಂತ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಭಾನುವಾರವೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.

ಶಾಲಾವರಣದಲ್ಲಿ ತಳಿರು ತೋರಣ:
ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಳಿರು ತೋರಣ ಕಟ್ಟಿ ಶಾಲೆಗೆ ಅಲಂಕಾರ ಮಾಡಲಾಗಿತ್ತು. ಶಾಲಾ ಮುಂಭಾಗದ ಆವರಣ ಗೋಡೆಯ ಗೇಟ್‌ಗೆ ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಆಹ್ವಾನಿಸಿದರು.

ಮಕ್ಕಳು ಶಾಲಾವರಣದಲ್ಲಿ ರಂಗೋಲಿ ಬಿಡಿಸಿ ಅಂದಹೆಚ್ಚಿಸಿದ್ದರು.

ಹೂ ಕೊಟ್ಟು ವಿದ್ಯಾರ್ಥಿಗಳ ಸ್ವಾಗತ:
ಇನ್ನೂ ಕೆಲ ಕಡೆ ಮಕ್ಕಳನ್ನು ಹೂವು ಕೊಟ್ಟು ಶಿಕ್ಷಕರು ಶಾಲೆಗೆ ಬರ ಮಾಡಿಕೊಂಡರು. ಮಕ್ಕಳು ಹೂವು ಪಡೆದು ನಗೆ ಬೀರಿ ಶಾಲೆಯ ಒಳಗೆ ತೆರಳಿದರು.

ಸಿಹಿಯೂಟ ವ್ಯವಸ್ಥೆ:
ಶಾಲಾರಂಭದ ಮೊದಲ ದಿನ ಸಿಹಿಯೂಟ ನೀಡಿ ಶಿಕ್ಷಕರು ಬರಮಾಡಿಕೊಂಡರು. ಕೆಲ ಕಡೆ ಸಿರಾ, ಸಜ್ಜಕ ಮಾಡಿದ್ದರು.

ಸೊರಗಿದ ಹಾಜರಾತಿ:
ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿದ್ದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿರುವುದು ಕಂಡು ಬಂದಿತು. ಶೇ 20ಕ್ಕಿಂತ ಕಡಿಮೆ ಹಾಜರಾತಿ ಇದೆ. ಹಲವು ಶಾಲೆಗಳಲ್ಲಿ ಮೂಲಸೌಕರ್ಯಗಳು ಇಲ್ಲ. ಫ್ಯಾನ್‌ ಇಲ್ಲದ ಕಾರಣ ಮಕ್ಕಳು ಬರಲು ಹಿಂದೇಟು ಹಾಕಿರುವುದು ಕಂಡು ಬಂತು.

***

ಸೋಮವಾರದಿಂದ ಶಾಲೆಗಳು ಆರಂಭಗೊಂಡಿದ್ದು, ಬಿಸಿಲಿನ ಕಾರಣ ಶೇ 20ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಸಿಹಿಯೂಟ ನೀಡಿ ಬರಮಾಡಿಕೊಳ್ಳಲಾಗಿದೆ
ಶಾಂತಗೌಡ ಪಾಟೀಲ, ಡಿಡಿಪಿಐ

***

ಶಾಲೆಯಲ್ಲಿ ಮೊದಲ ದಿನ ಆಟ ಪಾಠದ ಮೂಲಕ ವಿದ್ಯಾರ್ಥಿನಿಯರನ್ನು ಬರಮಾಡಿಕೊಳ್ಳಲಾಗಿದೆ. ಹೂಗುಚ್ಛ ನೀಡಿ ವಾಲಿಬಾಲ್‌ ಆಡಿಸಲಾಗಿದೆ
ಕವಿತಾ ಎಂ., ಸರ್ಕಾರಿ ಕನ್ಯಾ ಪ್ರೌಢಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.