ADVERTISEMENT

ಯಾದಗಿರಿ: ನವ ಸ್ವಾತಂತ್ರ್ಯದ ಜನಕ ಸ್ವಾಮಿ ವಿವೇಕಾನಂದ

ಸ್ವಾತಂತ್ರ‍್ಯ ಚಳವಳಿಗೆ ಮುನ್ನುಡಿ ಬರೆದ ವಿವೇಕರ ವಾಣಿ: ಡಾ.ರಾಗಪ್ರಿಯಾ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 17:16 IST
Last Updated 12 ಜನವರಿ 2022, 17:16 IST
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವದಿನದ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವದಿನದ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು   

ಯಾದಗಿರಿ: ಸ್ವಾಮಿ ವಿವೇಕಾನಂದರ ವಾಣಿಯಿಂದಾಗಿ ಅನೇಕ ಮಹಾನ್ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಹೀಗಾಗಿ ಸ್ವಾತಂತ್ರ್ಯ ಚಳವಳಿಗೆ ಮುನ್ನುಡಿ ಬರೆದ ಇವರಿಗೆ ನವ ಸ್ವಾತಂತ್ರ್ಯದ ಜನಕ ಎಂದು ಕರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗುತ್ತಾರೆ. ಆದರೆ, ಅವರ ಗೆಳೆಯನ್ನೊಬ್ಬ ಉತ್ತೀರ್ಣನಾಗುತ್ತಾನೆ. ಇವರಿಗೆ ತಾವು ಫೇಲ್ ಆಗಿದ್ದ ದುಃಖಕ್ಕಿಂತ ತನ್ನ ಗೆಳೆಯ ಪಾಸ್ ಆಗಿದ್ದಕ್ಕೆ ಅವರಿಗೆ ಇನ್ನೂ ಜಾಸ್ತಿ ದುಃಖವಾಗುತ್ತದೆ ಎಂದ ಅವರು, ಸ್ವಾಮಿ ವಿವೇಕಾನಂದರು ಹೇಳುವಂತೆ ಇನ್ನೊಬ್ಬರ ಮೇಲೆ ಅವಲಂಬಿತವಾಗದೆ ನಿನ್ನನ್ನು ನೀನು ರೂಪಿಸಿಕೊಳ್ಳಬೇಕು. ನಮ್ಮ ಕೆಲಸದ ಮೇಲೆ ನಮಗೆ ತೃಪ್ತಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಸ್ವಾಮಿ ವಿವೇಕಾನಂದರ ಕನಸಿನ ಭಾರತ ದೇಶದ ನಿರ್ಮಾಣ ಯುವ ಜನಾಂಗದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾತನಾಡಿ, ಸ್ವಾಮಿ ವಿವೇಕಾನಂದರು ತಮ್ಮ ಜೀವಿತದ ಕೆಲವೇ ವರ್ಷಗಳಲ್ಲಿ ಮಾಡಿದ ಸಾಧನೆ ಅಗಾಧವಾಗಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದ ಸ್ವಾಮಿ ವಿವೇಕಾನಂದರು ಚಿಕಾಗೊದಲ್ಲಿ ನಡೆದ ಧಾರ್ಮಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಸಹೋದರ, ಸಹೋದರಿಯರೇ ಎಂದು ಉಚ್ಚರಿಸಿ ಜಗತ್ತಿಗೆ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ಜೀವನದಲ್ಲಿ ಗುರಿ ಮತ್ತು ಛಲವಿರಬೇಕು. ಕಷ್ಟಗಳನ್ನು ಎದುರಿಸಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ನುಡಿದರು.

ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಯುವಕರನ್ನು ನನಗೆ ಕೊಡಿ ದೇಶದ ಭವಿಷ್ಯವನ್ನೇ ಬದಲಾಯಿಸುತ್ತೇನೆ ಎಂದ ಮಹಾನ್ ಪುರುಷ, ವೀರಕ್ರಾಂತಿ ಸ್ವಾಮಿ ವಿವೇಕಾನಂದರು ಎಂದರು.

ನಮ್ಮ ಭಾರತ ದೇಶದ ಪರಂಪರೆ, ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ್ದಾರೆ. ಇಂಥ ಮಹಾನ್ ವ್ಯಕ್ತಿಗಳ ಆದರ್ಶವನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು. ನಾವು ಸಮಸ್ಯೆಗಳಿಗೆ ಬೆನ್ನು ಕೊಟ್ಟು ಓಡಿದರೆ ಖಂಡಿತವಾಗಿ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಯುವಕರು ಸಮಸ್ಯೆಗಳನ್ನು ಎದುರಿಸಿ ನಿಲ್ಲಬೇಕು ಎಂದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಶೋಕ ತೋಟದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ರಾಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ದೇವಿಂದ್ರಪ್ಪ ಹಳಿಮನಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.