ADVERTISEMENT

ಯಾದಗಿರಿ: ಯಾರಿಗೆ ಒಲಿಯಲಿದೆ ಸಚಿವ ಸ್ಥಾನ

ಜಿಲ್ಲೆಯ ಜನರಲ್ಲಿ ಹೆಚ್ಚಿದ ನಿರೀಕ್ಷೆ; ತೀವ್ರ ಕುತೂಹಲ

ಬಿ.ಜಿ.ಪ್ರವೀಣಕುಮಾರ
Published 29 ಜುಲೈ 2021, 4:07 IST
Last Updated 29 ಜುಲೈ 2021, 4:07 IST
ವೆಂಕಟರೆಡ್ಡಿ ಮುದ್ನಾಳ
ವೆಂಕಟರೆಡ್ಡಿ ಮುದ್ನಾಳ   

ಯಾದಗಿರಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾದಗಿರಿ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ಯಾರಿಗೆ ಒಲಿಯಲಿದೆ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಕುತೂಹಲ ಹೆಚ್ಚಿದೆ.

ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಶಾಸಕರ ಅಭಿಮಾನಿಗಳು ಪೋಸ್ಟ್‌ ಮಾಡುವ ಮೂಲಕ ತಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಕೋರುತ್ತಿದ್ದಾರೆ.

ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿಯ ಇಬ್ಬರು ಶಾಸಕರು, ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ತಲಾ ಒಬ್ಬರು ಶಾಸಕರಿದ್ದಾರೆ. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ಸುರಪುರ ಶಾಸಕ ರಾಜೂಗೌಡ (ನರಸಿಂಹ ನಾಯಕ) ಇಬ್ಬರೂ ಬಿಜೆಪಿ ಶಾಸಕರಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

ADVERTISEMENT

‘ವೆಂಕಟರೆಡ್ಡಿ ಮುದ್ನಾಳ ಅವರು ಮೊದಲ ಬಾರಿ ಮತ್ತು ರಾಜೂಗೌಡ ಮೂರನೇ ಬಾರಿ ಶಾಸಕರಾಗಿದ್ದಾರೆ. ರಾಜೂಗೌಡ ಅವರು ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಇಬ್ಬರ ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಬೆಂಬಲಿಗರು ಕೋರಿದ್ದಾರೆ.

ಬೇರೆ ಜಿಲ್ಲೆಯ ಉಸ್ತುವಾರಿಗಳು:ಸಮ್ಮಿಶ್ರ ಸರ್ಕಾರದಲ್ಲಿ ಹುಮನಬಾದ್ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ನಂತರ ಔರಾದ್ ಶಾಸಕ ಪ್ರಭು ಚವಾಣ್‌ ಜಿಲ್ಲಾ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಚೆಗೆ ರಾಣೆಬೆನ್ನೂರ ಶಾಸಕ ಆರ್.ಶಂಕರ್‌ ಅವರು ಜಿಲ್ಲಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾದರೆ, ನಿಯಮಿತವಾಗಿ ಬರುವುದಿಲ್ಲ. ಇದೇ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗುತ್ತದೆ. ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗುತ್ತದೆ’ ಎಂದು ಅವರು ಜನರು ಹೇಳುತ್ತಾರೆ.

‘ಸಂಬಂಧಿಸಿದವರಿಗೆ ಭೇಟಿಯಾಗಿದ್ದೇನೆ’
‘ಸಚಿವ ಸ್ಥಾನ ನೀಡುವ ಕುರಿತಂತೆ ಈಗಾಗಲೇ ಪಕ್ಷದ ಮುಂಚೂಣಿ ನಾಯಕರಿಗೆ ಭೇಟಿಯಾಗಿದ್ದೇನೆ’ ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಮುಖಂಡರ ಜೊತೆ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರನ್ನು ಭೇಟಿಯಾಗಿ, ಆದ್ಯತೆ ನೀಡುವಂತೆ ಕೇಳಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

***

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕು. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡಬೇಕು.
-ವಿಲಾಸ ಪಾಟೀಲ, ನಗರಸಭೆ ಅಧ್ಯಕ್ಷ

***

‌ಯಾದಗಿರಿ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಬೇಕು. ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನ ಕೊಟ್ಟು ಶಾಸಕ ವೆಂಕಟರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು.
-ಶ್ರೀಕಾಂತ್ ಸುಂಗಲ್‌ಕರ್, ನಗರ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ

***

ಶಾಸಕ ರಾಜೂಗೌಡ ಮೂರು ಬಾರಿ ಶಾಸಕರಾಗಿ, ಒಂದು ಸಚಿವರಾಗಿ ಅಧಿಕಾರ ಚಲಾಯಿಸಿದ್ದಾರೆ. ಹೀಗಾಗಿ ಅನುಭವದ ಮೇಲೆ ಇವರನ್ನು ನೇಮಕ ಮಾಡಬೇಕು.
-ಮೇಲಪ್ಪ ಗುಳಗಿ, ಸುರಪುರ ಮಂಡಲ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.