ADVERTISEMENT

ಯಾದಗಿರಿ: ಈರುಳ್ಳಿಗೆ ಟ್ವಿಸ್ಟರ್ ಶಿಲೀಂಧ್ರ ಬಾಧೆ

ಮಣ್ಣಿನಲ್ಲಿ ತೇವಾಂಶ ಹೆಚ್ಚಳದಿಂದ ಕಾಣಿಸಿಕೊಂಡ ರೋಗ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 16:39 IST
Last Updated 7 ಸೆಪ್ಟೆಂಬರ್ 2021, 16:39 IST
ಯರಗೋಳ ಸಮೀಪದ ಗುಲಗುಂದಿ ಗ್ರಾಮದ ಹೊಲಗಳಲ್ಲಿ ನಾಟಿಯಾದ ಈರುಳ್ಳಿ ಬೆಳೆಗೆ ಸುಳಿರೋಗ ತಗುಲಿದೆ
ಯರಗೋಳ ಸಮೀಪದ ಗುಲಗುಂದಿ ಗ್ರಾಮದ ಹೊಲಗಳಲ್ಲಿ ನಾಟಿಯಾದ ಈರುಳ್ಳಿ ಬೆಳೆಗೆ ಸುಳಿರೋಗ ತಗುಲಿದೆ   

ಯರಗೋಳ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಈರುಳ್ಳಿ ಬೆಳೆಗೆಟ್ವಿಸ್ಟರ್ ಶಿಲೀಂಧ್ರ ಬಾಧೆ (ಸುಳಿ ರೋಗ) ಕಾಡುತ್ತಿದ್ದು, ರೈತರಿಗೆ ಕಣ್ಣೀರು ತರಿಸಿದೆ.

ಕಳೆದ ಕೆಲವು ದಿನಗಳಿಂದ ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಇದರಿಂದಾಗಿ ಕೋಟಗೇರಾ, ಮೋಟ್ನಳ್ಳಿ, ಕೆ. ಹೊಸಳ್ಳಿ, ಹೊನಗೇರಾ, ಕಟ್ಟಿಗೆ ಶಹಾಪುರ, ಗುಲಗುಂದಿ ಗ್ರಾಮದಲ್ಲಿ ಬೆಳೆದ ಈರುಳ್ಳಿಗೆ ಬಾಧೆ ಕಾಣಿಸಿಕೊಂಡಿದೆ.

‘ಮಳೆ, ಮೋಡ ಕವಿದ ವಾತಾವರಣದಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗಕ್ಕೆ ತುತ್ತಾದ ಎಲೆಗಳು ಮತ್ತು ಕಾಂಡದ ಭಾಗವು ತಿರುಚಿಗೊಂಡು ನೆಲಕ್ಕೆ ಬೀಳುತ್ತದೆ. ರೋಗದ ತೀವ್ರತೆ ಹೆಚ್ಚಾದರೆ ಸುಟ್ಟಂತೆ ಆಗುತ್ತದೆ. ಬೆಳವಣಿಗೆಯೂ ಕುಂಠಿತವಾಗುತ್ತದೆ. ಗಾಳಿಯ ಮೂಲಕ ರೋಗವು ಹರಡುತ್ತದೆ. ತೇವಾಂಶವನ್ನು ಕಡಿಮೆ ಮಾಡುವುದಕ್ಕೆ ಮಣ್ಣಿನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು’ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ADVERTISEMENT

ಕೊರೊನಾ ಸಂಕಷ್ಟದ ನಡುವೆಯು ರಸಗೊಬ್ಬರ, ಬಿತ್ತನೆ ಬೀಜ, ಕೂಲಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ನಾಟಿ ಮಾಡಿದ ರೈತರು ಈಗ ಕಂಗಲಾಗಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಬೆಳೆಗೆ ತಗುಲಿದ ರೋಗವನ್ನು ನಿಯಂತ್ರಿಸುವ ಕುರಿತು ಸಲಹೆ ಪಡೆಯುತ್ತಿದ್ದಾರೆ.

ಗುಲಗುಂದಿ ತಾಂಡಾದ ರೈತ ಚತ್ರು ಮಾತನಾಡಿ, ‘2 ಎಕರೆ ಹೊಲದಲ್ಲಿ ₹23 ಸಾವಿರ ಖರ್ಚು ಮಾಡಿ ಈರುಳ್ಳಿ ನಾಟಿ ಮಾಡಿದ್ದೇನೆ. ಈಗ ಬೆಳೆ ಬೆಳವಣಿಗೆಯಾದ ಕೆಲವೇ ದಿನಗಳಲ್ಲಿ ನೆಲಕ್ಕೆ ಬೀಳುತ್ತಿದೆ. ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಅವರು ತಿಳಿಸಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಸುಂದರೇಶ ಮಾತನಾಡಿ, ಬಂದಳ್ಳಿ ಮತ್ತು ಎಸ್.ಹೊಸಳ್ಳಿ ಗ್ರಾಮದ ಹೊಲಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದರು.

****

ರೋಗ ನಿಯಂತ್ರಣಕ್ಕೆ ತಜ್ಞರ ಸಲಹೆ

‘ರೋಗದ ನಿರ್ವಹಣೆಗೆ ಥಿಯೋಪಿನೈಟ್ ಮಿಥೈಲ್ ಒಂದು ಗ್ರಾಂ ಅನ್ನು ಪ್ರತಿ ಲೀಟರ್‌ನಲ್ಲಿ ಅಥವಾ ಹೆಕ್ಸಕೋನಾಜೋಲ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು. ಒಂದು ವಾರದ ನಂತರ ಎರಡು ಗ್ರಾಂಗಳಷ್ಟು ಬೋರಾನ್ ಜಿಂಕ್ ಮತ್ತು ಮ್ಯಾಂಗನೀಸ್ ಲಘು ಪೋಷಕಾಂಶವನ್ನು ಪ್ರತಿ ಲೀಟರ್‌ಗೆ ಬೆರಸಿ ಸಿಂಪಡಣೆ ಮಾಡಬೇಕು’ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ಮಾಹಿತಿಗೆ ಹತ್ತಿಕುಣಿ ಸಹಾಯಕ ತೋಟಗಾರಿಕೆ ಅಧಿಕಾರಿ ಸುಂದರೇಶ ಅವರನ್ನು (ಮೊ: 77607 31657) ಸಂಪರ್ಕಿಸಬಹುದು.

***

ಸಾವಿರಾರು ಖರ್ಚು ಮಾಡಿ 3 ಎಕರೆ ಹೊಲದಲ್ಲಿ ಈರುಳ್ಳಿ ನಾಟಿ ಮಾಡಿದ್ದೇನೆ. ಈಗ ರೋಗ ಬಾಧೆಯಿಂದ ಬೆಳೆಯು ನೆಲಕಚ್ಚಿದೆ. ಸರ್ಕಾರ ರೈತರ ಸಹಾಯಕ್ಕೆ ಬರಬೇಕು
ಬಸರಡ್ಡಿ, ರೈತ, ಕಟ್ಟಿಗೆ ಶಹಾಪುರ

***

ಅಧಿಕಾರಿಗಳು ಈರುಳ್ಳಿ ಬೆಳೆಗೆ ತಗುಲಿದ ಸುಳಿ ರೋಗದ ಕುರಿತು ಮಾಹಿತಿ ನೀಡಿದ್ದಾರೆ. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲಹೆ ಪಡೆಯಬಹುದು

ರಾಘವೇಂದ್ರ ಉಕ್ಕಿನಾಳ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.