ADVERTISEMENT

ಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಆಶ್ರಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 3:09 IST
Last Updated 7 ಸೆಪ್ಟೆಂಬರ್ 2025, 3:09 IST
ಯಾದಗಿರಿ ನಗರ ಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿದರು. ಪೌರಾಯುಕ್ತ ಉಮೇಶ ಚವ್ಹಾಣ್ ಉಪಸ್ಥಿತಿರಿದ್ದರು
ಯಾದಗಿರಿ ನಗರ ಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿದರು. ಪೌರಾಯುಕ್ತ ಉಮೇಶ ಚವ್ಹಾಣ್ ಉಪಸ್ಥಿತಿರಿದ್ದರು   

ಯಾದಗಿರಿ: ‘ಸ್ವಂತ ಮನೆ ಹೊಂದುವ ಬಡವರ ಪಾಲಿನ ಆಶಾ ಕಿರಣವಾಗಿ ಆಶ್ರಯ ಸಮಿತಿ ಕೆಲಸ ಮಾಡಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕಡುಬಡವರಿಗೆ ಸ್ವಂತ ಮನೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂಮಿ ಖರೀದಿ ಮಾಡುತ್ತಿವೆ.‌ ಜತೆಗೆ ಸಬ್ಸಿಡಿ ಹಣದಲ್ಲಿ ನಿವೇಶನ ಕೊಡುವ ಇಂತಹ ಜನಪರ ಯೋಜನೆಯ ಯಶಸ್ಸಿಗೆ ಎಲ್ಲರೂ ಪಕ್ಷಬೇಧ ಮರೆತು ಶ್ರಮಿಸಬೇಕು. ಈಗಿರುವ ಆಶ್ರಯ ಯೋಜನೆಯ ನಿವೇಶನಗಳ ಹಂಚಿಕೆಗೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಅರ್ಹರಿಗೆ ನಿವೇಶನ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು’ ಎಂದರು.

ADVERTISEMENT

2025-26ನೇ ಸಾಲಿನ 2.0 ಪಿಎಂಎವೈ ಅರ್ಜಿಗಳ ವಿಲೇವಾರಿ ಕುರಿತು ಸುದೀರ್ಘವಾಗಿ ಚರ್ಚಿಸಿದ ಶಾಸಕರು, ‘ನಗರ ವಾಸಿಗಳಾದ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಈಗಾಗಲೇ ಪಿಎಂಎವೈ ಯೋಜನೆಯಡಿ ಒಟ್ಟು 3,050 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರ 9 ಜನರಿಗೆ ಸರ್ವೆ ನಂಬರ್ 151\1ರಲ್ಲಿ ನಿವೇಶನ ನೀಡಬೇಕು. ಈ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ‘ನಗರಸಭೆ ಆಶ್ರಯ ಬಡಾವಣೆಗಳ ಸರ್ವೆ ನಂಬರ್ 151ರಲ್ಲಿಯ 42 ನಿವೇಶನಗಳನ್ನು ಕಾನೂನು ಸಲಹೆ ಪಡೆದು ಕಚೇರಿಯ ಹಂತದಲ್ಲಿ ಪರಿಶೀಲಿಸಬೇಕು’ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

‘ಇದೇ ಸರ್ವೆ ನಂಬರ್‌ನಲ್ಲಿ ಹೈಟೆನ್ಶನ್ ವೈರ್ ಹೋಗಿದ್ದು ಅದರ ಕೆಳಗಡೆ ಮನೆಗಳಿವೆ. ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವೈರ್ ಸ್ಥಳಾಂತರಿಸಬೇಕು ಮತ್ತು ರಸ್ತೆ ನಿರ್ಮಾಣ ಬಗ್ಗೆಯೂ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದ ತಿಳಿಸಿದರು.

ಸಭೆಯಲ್ಲಿ ಸದಸ್ಯರು ಆಶ್ರಯ ಸಮಿತಿಗೆ ಪ್ರತ್ಯೇಕ ಕಚೇರಿಯ ವ್ಯವಸ್ಥೆ ಮಾಡವಂತೆ ಮನವಿ ಮಾಡಿದರು. ಕೂಡಲೇ ಕಚೇರಿ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಸುಮಾರು ವರ್ಷಗಳಿಂದ ಆಶ್ರಯ ಸಮಿತಿಗೆ ಸೇರಿದ ಸರ್ವೆ ನಂಬರ್ 88\6 ಮತ್ತು 90\2ರಲ್ಲಿ ಅತಿಕ್ರಮಣವಾಗಿರುವುದು ಸದಸ್ಯರು ಗಮನಕ್ಕೆ ತಂದರು. ಕೂಡಲೇ ಅತಿಕ್ರಮಣ ಮಾಡಿದ 70 ಜನರಿಗೆ ನೋಟಿಸ್ ನೀಡಲು ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ನಗರಸಭೆ ಪೌರಯುಕ್ತ ಉಮೇಶ ಚವ್ಹಾಣ್, ಆಶ್ರಯ ಸಮಿತಿ ಸದಸ್ಯರಾದ ಪ್ರಭಾಕರ್ ಜಿ., ಆರತಿ ಅಮರೇಶ್ ಜಾಕ, ಶಿವಕುಮಾರ್ ಕರದಳ್ಳಿ, ಎಮ್ಯಾನುಯೆಲ್ ಕ್ರಿಸ್ಟೋಫರ್ ಬೆಳ್ಳಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.