ಯಾದಗಿರಿ: ‘ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಛಲ ಅಚಲವಾಗಿ ಇದ್ದಾಗ ಯಾವ ಸಮಸ್ಯೆ, ನ್ಯೂನತೆಯೂ ನಮ್ಮನ್ನು ತಡೆಯುವುದಿಲ್ಲ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ಇಲ್ಲಿನ ಪದವಿ ಮಹಾವಿದ್ಯಾಲಯದ ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಬುಧವಾರ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ವಿಕಲಚೇತನರ ಸಬಲೀಕರಣ ಹಾಗೂ ಕೌಶಲ ಅಭಿವೃದ್ದಿ ಕೇಂದ್ರ ಕಲ್ಯಾಣ ಇಲಾಖೆ, ಸಿಆರ್‌ಪಿ ದಾವಣಗೆರೆ ವತಿಯಿಂದ ಆಯೋಜಿಸಿದ್ದ ಅಂಗವಿಕಲರ ನೇರಳೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಧಿಸಬೇಕು ಎನ್ನುವ ಛಲ ಜತೆಯಲ್ಲಿ ಇದ್ದರೆ ನಾವು ಯಾವುದೇ ಸ್ಥಿತಿಯಲ್ಲಿ ಇದ್ದರೂ ಸೋಲು ನಮ್ಮ ಬಳಿ ಸುಳಿಯುವುದಿಲ್ಲ. ಗೆಲುವನ್ನೂ ತಪ್ಪಿಸಲು ಆಗುವುದಿಲ್ಲ. ಅಂಗವಿಕಲರಲ್ಲಿ ನ್ಯೂನತೆ ಇದ್ದರೂ ಮತ್ತೊಂದು ಕಡೆ ಕಲೆಯೂ ಅವರಿಗೆ ವರವಾಗಿ ಬಂದಿರುತ್ತದೆ’ ಎಂದರು.
‘ನಮ್ಮ ಬಳಿ ಇಲ್ಲದೆ ಇರುವುದರ ಬಗ್ಗೆ ಚಿಂತಿಸುವುದಕ್ಕಿಂತ, ಸಕರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು. ಸರ್ಕಾರವು ಅಂಗವಿಕಲರಿಗಾಗಿ ಜಾರಿಗೆ ತಂದಿರುವ ಯೋಜನೆಗಳು, ಸವಲತ್ತುಗಳನ್ನು ಅರ್ಹರಿಗೆ ಮುಟ್ಟಿಸುವಂತಹ ಕೆಲಸಗಳು ಆಗುಬೇಕಿದೆ. ನೇರಳೆ ಅಂತಹ ಮೇಳಗಳು ಸೌಕರ್ಯಗಳನ್ನು ಒದಗಿಸುವ ವೇದಿಕೆಗಳಾಗಬೇಕು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ‘ಸಾಧಿಸುವ ಗುಣ ಮತ್ತು ಛಲದಿಂದಾಗಿಯೇ ಅಂಗವಿಕಲರಾಗಿದ್ದರೂ ಅರುಣಿಮಾ ಸಿನ್ಹಾ ಅವರು ಮೌಂಟ್ ಎವರೆಸ್ಟ್ ಏರಿದ್ದರು. ಆ ಮೂಲಕ ದೇಶದ ಪ್ರಥಮ ಅಂಗವಿಕಲ ಪರ್ವತಾರೋಹಿಣಿ ಎಂಬ ಖ್ಯಾತಿಯೂ ಗಳಿಸಿದ್ದಾರೆ. ನಿರಂತರ ಪ್ರಯತ್ನದಿಂದ ಎಂತಹ ಸಮಸ್ಯೆಗಳನ್ನು ಮೆಟ್ಟಿನಿಂತು ಜಗತ್ತಿಗೆ ತನ್ನ ಸಾಧನೆಯ ಮೂಲಕ ಪರಿಚಯಿಸಿಕೊಳ್ಳಬಹುದು ಎಂಬುದಕ್ಕೆ ನಿದರ್ಶನ ಇದು’ ಎಂದರು.
ರಾಜ್ಯ ಅಂಗವಿಕಲರ ಹಕ್ಕುಗಳ ಆಯೋಗದ ಆಯುಕ್ತ ದಾಸ್ ಸೂರ್ಯವಂಶಿ ಮಾತನಾಡಿ, ‘ನಮ್ಮೊಳಗೆ ಮನೆ ಮಾಡಿರುವ ಅಂಧಕಾರ ಮತ್ತು ಸಣ್ಣತನವನ್ನು ಮೆಟ್ಟಿ ನಿಲ್ಲಬೇಕು. ನ್ಯೂನತೆಯತ್ತ ಗಮನಕೊಡದೆ ಲಭ್ಯ ಇರುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಗ್ಯಕರ ಜೀವನ ನಡೆಸಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ‘ಯಿಮ್ಸ್’ ಮುಖ್ಯಸ್ಥ ಡಾ. ಸಂದೀಪ್ ಹರಸಂಗಿ, ಯಿಮ್ಸ್’ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಕುಮಾರ ಅಂಗಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಎಪಿಡಿ ಸಂಸ್ಥೆಯ ಸಂಪ್ರಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರೋಗ್ಯ ತಪಾಸಣೆ ಸಾಧನ ಸಲಕರಣೆಗಳ ಪ್ರದರ್ಶನ
ಮೇಳದಲ್ಲಿ 10ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಅಂಗವಿಕಲರ ಬಳಕೆಯ ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಮರ್ಥನಂ ಅಂಗವಿಕಲರ ಸಂಸ್ಥೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ) ಕೇರ್ ಇಂಟರ್‌ನ್ಯಾಷನಲ್ ಇಂಡಿಯಾ ಟ್ರಸ್ಟ್ ಶಾಂತಿನಿಕೇತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳ ಮಳಿಗೆಗಳು ತೆರೆದಿದ್ದವು. ಮಾತು ಬಾರದ ಶ್ರವಣದೋಷ ಹೊಂದಿರುವವರ ಆರೋಗ್ಯ ತಪಾಸಣೆಯೂ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಶರಣಗೌಡ ಕಂದಕೂರು ಮಳಿಗೆಗಳಿಗೆ ಭೇಟಿ ನೀಡಿ ವಿಕ್ಷೀಸಿದರು. ಅವರು ಅಂಗವಿಕಲ ವಿದ್ಯಾರ್ಥಿಗೆ ಗಾಲಿ ಕುರ್ಚಿಗಳನ್ನು ವಿತರಿಸಿದರು.
‘ಯಿಮ್ಸ್‌ನಲ್ಲಿ ಪುನರ್ ವಸತಿ ಕೇಂದ್ರ ಸ್ಥಾಪಿಸಿ’
‘ಜಿಲ್ಲೆಯ ಯಿಮ್ಸ್‌ನಲ್ಲಿ ಅಂಗವಿಕಲರ ಪುನರ್ ವಸತಿ ಕೇಂದ್ರ (ಡಿಸಿಆರ್‌ಸಿ) ಸ್ಥಾಪಿಸಬೇಕು’ ಎಂದು ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಸಂಗನಗೌಡ ಧನರೆಡ್ಡಿ ಅವರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಎಲ್ಲಾ ಇಲಾಖೆಗಳಲ್ಲಿ ಡಿಸೆಂಬರ್ 3ರಂದು ಅಂಗವಿಕಲರ ದಿನ ಆಚರಿಸುವಂತೆ ಸುತ್ತೋಲೆ ಹೊರಡಿಸಬೇಕು. ಶಕ್ತಿ ಯೋಜನೆಯನ್ನು ಅಂಗವಿಕಲರಿಗೂ ವಿಸ್ತರಿಸಬೇಕು. ರೈಲ್ವೆ ಪಾಸ್ ಅರ್ಜಿ ಪಡೆದು ಸಲ್ಲಿಸಲು ನೆರೆಯ ರಾಯಚೂರಕ್ಕೆ ಹೋಗಬೇಕಿದೆ. ಇದನ್ನು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಬೇಕು. ರೈಲ್ವೆ ನಿಲ್ದಾಣದಲ್ಲಿ ಅಂಗವಿಕಲರ ಸ್ನೇಹಿ ಶೌಚಾಲಯ ನಿರ್ಮಿಸಬೇಕು ಎಂದು ಕೋರಿದರು.
ನೇರಳೆ ಮೇಳದಲ್ಲಿ ಶಹಾಪುರ ಸುರಪುರ ಸೇರಿದಂತೆ ಜಿಲ್ಲೆಯ ನಾನಾ ಭಾಗದಿಂದ ಬಂದು ನೂರಾರು ಅಂಗವಿಕಲರು ಪಾಲ್ಗೊಂಡಿದ್ದಾರೆ.-ಶರಣಪ್ಪ ಪಾಟೀಲ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.