ಯಾದಗಿರಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ, ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು, ಅಕ್ಷರ ಜ್ಞಾನವನ್ನು ಬದುಕಿನ ಜ್ಞಾನದ ಶಿಕ್ಷಣ ಬೀಜವನ್ನು ಹೃದಯದಲ್ಲಿ ಬಿತ್ತುತ್ತಿರುವ ಪ್ರತಿಯೊಬ್ಬ ಗುರುಗಳು ದೇವ ಸ್ವರೂಪಿಗಳು. ಪ್ರತಿ ದಿನ ತಂದೆ ತಾಯಿ ಹಾಗೂ ಶಿಕ್ಷಕರನ್ನು ದೇವರೆಂದೇ ಕಾಣಬೇಕು. ಓದಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ನುಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಾದಗಿರಿ ತಾಲ್ಲೂಕು ವ್ಯಾಪ್ತಿಯ ಯಾದಗಿರಿ ವಲಯದ ನಗರದ ಮೈಲಾಪುರ ಅಗಸಿ ಕಾರ್ಯಕ್ಷೇತ್ರದ ವ್ಯಾಪ್ತಿಯ ಕೋಳಿವಾಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿನ್ನೆಲೆ, ಚಾರಿಟೇಬಲ್ ಸಂಸ್ಥೆಯಾಗಿ ಕರ್ನಾಟಕ ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಕೈಗೊಂಡ ಕಾರ್ಯಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಸಮುದಾಯದ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಗ್ರಾಮೀಣ ಭಾಗಗಳಲ್ಲಿ ಅನುಷ್ಠಾನ ಮಾಡಿ ಗ್ರಾಮೀಣ ಜನರ ಬದುಕನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿ, ಉಳಿತಾಯ ಮನೋಭಾವನೆ ಮೂಡಿಸಿ, ಜನರ ಅಭಿವೃದ್ಧಿ ಆರ್ಥಿಕತೆಗೆ ಮುನ್ನೆಲೆ ನೀಡಿ, ಮಹಿಳಾ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದಾಗಿ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಬಿರನೂರ್ ಮಾತನಾಡಿ, ಮನೆಗೊಂದು-ಮಗು ಮಗುವಿಗೊಂದು-ಮರ ಎನ್ನುವ ವಾಸ್ತವದ ವಿಷಯವಾಗಿ ಪರಿಸರ ಕಾಪಾಡುವಲ್ಲಿ ಮಕ್ಕಳ ಪಾತ್ರ ಬಹುಮುಖ್ಯ, ಸದೃಢ ಸಮಾಜ ಕಟ್ಟಲು ಮಕ್ಕಳು ಸದಾ ಪರಿಸರದ ಜಾಗೃತಿಯ ಕುರಿತು ಕಾರ್ಯ ಪ್ರವೃತ್ತರಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಮರೆಪ್ಪ ಮ್ಯಾಗೇರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಕಾರ್ಯಗಳನ್ನು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಸಬಲೀಕರಣ ಹಾಗೂ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಈ ಭಾಗದ ಭಾಗ್ಯ ಎಂದರು.
ಇದೇ ಸಂದರ್ಭದಲ್ಲಿ ಪರಿಸರ ದಿನಾಚರಣೆ ವಿಷಯವಾಗಿ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಅರಿವು ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಯೋಜನೆ ವತಿಯಿಂದ ಬಹುಮಾನಗಳ ವಿತರಣೆ ಮಾಡಲಾಯಿತು.
ಶಾಲೆಯ ಶಿಕ್ಷಕಿ ಶ್ರೀಶೈಲಾ ಜ್ಯೋತಿ ನಿರೂಪಿಸಿದರು. ವಲಯದ ಮೇಲ್ವಿಚಾರಕಿ ಕಮಲಾ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಶರಣು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.