ವಡಗೇರಾ: ಸರ್ಕಾರವು, ರಾಜ್ಯದಲ್ಲಿರುವ ಎಲ್ಲ 31 ಮೊರಾರ್ಜಿ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಗಳನ್ನು ಕಡೆಗಣಿಸಲಾಗಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬ ಕೂಗು ಕೇಳಿದೆ.
ಸರ್ಕಾರವು, ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿರುವಂತೆ ಪ್ರತಿ ಜಿಲ್ಲೆಗೆ ಒಂದರಂತೆ ಮೊರಾರ್ಜಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತಿಕರಣ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ 31 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತಿಕರಣಗೊಳಿಸಿ, ಇತ್ತೀಚಿಗೆ ಆದೇಶ ಮಾಡಲಾಗಿದೆ. ಜತೆಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು, ಇದೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಅದರಲ್ಲಿ ಮೈಸೂರು ಜಿಲ್ಲೆಯ ಎರಡು ವಸತಿ ಶಾಲೆಗಳನ್ನು ಉನ್ನತೀಕರಣ ಗೊಳಿಸಲಾಗಿದೆ. ಆದರೆ ಈ ಭಾಗ್ಯ ಯಾದಗಿರಿ ಜಿಲ್ಲೆಗೆ ದೊರೆತಿಲ್ಲ.
ಮೈಸೂರು ಜಿಲ್ಲೆಗೆ ಎರಡು ವಸತಿ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಆದರೆ ಯಾದಗಿರಿ ಜಿಲ್ಲೆಯನ್ನು ಏಕೆ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಈ ಭಾಗದ ಪ್ರಜ್ಞಾವಂತ ನಾಗರಿಕರು ಹಾಗೂ ಶಿಕ್ಷಣ ಪ್ರೇಮಿಗಳು, ಉಸ್ತುವಾರಿ ಸಚಿವರು ಹಾಗೂ ಶಾಸಕರನ್ನು ಪ್ರಶ್ನಿಸಿದ್ದಾರೆ.
ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವರು, ಹಿಂದುಳಿದ ವರ್ಗದ ಸಚಿವರು ಹಾಗೂ ಶಾಸಕರು ಸೇರಿ ಯಾದಗಿರಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಿ, ಜಿಲ್ಲೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಗಳಲ್ಲಿ ಒಂದನ್ನು ಪಿಯು ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಲು ಯತ್ನಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಮೊರಾರ್ಜಿ ವಸತಿ ಶಾಲೆಯನ್ನು ಪಿಯು ಕಾಲೇಜನ್ನಾಗಿ ಮೇಲ್ದರ್ಜೆಗೇರಿಸುವ ಪಟ್ಟಿಯಿಂದ ಯಾದಗಿರಿ ಜಿಲ್ಲೆಯನ್ನು ಕೈಬಿಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಂಬಂಧಿಸಿದ ಸಚಿವರಿಗೆ ಮನವರಿಕೆ ಮಾಡಿ ವಸತಿ ಕಾಲೇಜನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.– ಚನ್ನಾರಡ್ಡಿ ಪಾಟೀಲ, ತುನ್ನೂರ ಶಾಸಕ
ಯಾದಗಿರಿ ಜಿಲ್ಲೆಯ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಒಂದು ಉನ್ನತೀಕರಿಸಿದ ಕಾಲೇಜಿನ ಅವಶ್ಯಕತೆಯಿದೆ. ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ.– ಯಂಕಣ್ಣ ಬಸಂತಪುರ, ಪಾಲಕರು ವಡಗೇರಾ
‘ಪದವಿ ಕಾಲೇಜು ಆರಂಭಿಸಿ’
ಜಿಲ್ಲೆಯಲ್ಲಿ ಒಟ್ಟು 21 ಮೋರಾರ್ಜಿ ವಸತಿ ಶಾಲೆಗಳಿವೆ. ಅದರಲ್ಲಿ ಪರಿಶಿಷ್ಟ ಪಂಗಡದ 5 ಜಾತಿಯ 13 ಸಾಮಾನ್ಯ 1 ಹಿಂದುಳಿದ ವರ್ಗದ 4 ಮೊರಾರ್ಜಿ ವಸತಿ ಶಾಲೆಗಳಿಗಳಿವೆ. ವಡಗೇರಾ ತಾಲ್ಲೂಕಿನಲ್ಲಿ 3 ಮೊರಾರ್ಜಿ ವಸತಿ ಶಾಲೆಗಳಿವೆ.
ಪಟ್ಟಣದಲ್ಲಿ ಹಿಂದುಳಿದ ವರ್ಗದವರ ವಸತಿ ಶಾಲೆಯಿದ್ದರೆ ತಾಲ್ಲೂಕಿನ ಬೆಂಡೆಬೆಂಬಳಿ(ಸಂಗಮ್) ಕಾಡಂಗೇರಾ(ಬಿ)ಗಳಲ್ಲಿ ಪರಿಶಿಷ್ಟ ಜಾತಿಯ ವಸತಿ ಶಾಲೆಗಳಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ತಾಲ್ಲೂಕು ಆಗಿರುವ ವಡಗೇರಾ ಶೈಕ್ಷಣಿಕವಾಗಿ ಹಿಂದುಳಿದೆ. ತಾಲ್ಲೂಕಿನಲ್ಲಿ ಒಂದೂ ಪದವಿಪೂರ್ವ ಕಾಲೇಜಿಲ್ಲ.
ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸೂಕ್ತ ಶೈಕ್ಷಣಿಕ ವ್ಯವಸ್ಥೆಯಿಲ್ಲದೆ ಹಾಗೂ ಆರ್ಥಿಕ ಹೊರೆಯನ್ನು ಹೊರಲಾಗದೇ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಿ ವಡಗೇರಾ ತಾಲ್ಲೂಕಿನಲ್ಲಿ ವಸತಿ ಸಹಿತ ಪದವಿಪೂರ್ವ ಕಾಲೇಜಿನ ಅಗತ್ಯವಿದೆ ಎಂಬುದು ಈ ಭಾಗದ ಪೋಷಕರ ಅಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.