ADVERTISEMENT

ಕೌಟುಂಬಿಕ ಕಲಹ: ಪತ್ನಿ, ಸಂಬಂಧಿಕರ ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 10:47 IST
Last Updated 29 ಜೂನ್ 2022, 10:47 IST
ಆರೋಪಿ ಶರಣಪ್ಪ ಈರಣ್ಣ
ಆರೋಪಿ ಶರಣಪ್ಪ ಈರಣ್ಣ   

ನಾರಾಯಣಪುರ (ಯಾದಗಿರಿ): ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬರು ಪತ್ನಿ ಹಾಗೂ ಸಂಬಂಧಿಕರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದು, ಒಬ್ಬರು ಸಾವನ್ನಪ್ಪಿರುವ ಘಟನೆ ನಾರಾಯಣಪುರದ ಛಾಯಾ ಕಾಲೊನಿಯಲ್ಲಿ ಬುಧವಾರ ನಡೆದಿದೆ‌.

ಆರೋಪಿ ಶರಣಪ್ಪ ಈರಣ್ಣ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಸಿದ್ದರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ಶರಣಪ್ಪ ಸರೂರ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ADVERTISEMENT

ಘಟನೆ ವಿವರ:ಆರೋಪಿ ಶರಣಪ್ಪ ಈರಣ್ಣ ಪತ್ನಿ ಹುಲಿಗೆಮ್ಮ ಜತೆ ಆಗಾಗ ಜಗಳವಾಡುತ್ತಿದ್ದ. ಇದರಿಂದ ಸುಮಾರು 14 ತಿಂಗಳ ಹಿಂದೆ ಹುಲಿಗೆಮ್ಮ ಪತಿ ಜೊತೆ ಜಗಳವಾಡಿ ಬೇರೆ ಮನೆ ಮಾಡಿ ವಾಸ ಮಾಡಿಕೊಂಡಿದ್ದಾರೆ. ಹುಲಿಗೆಮ್ಮ ರಾಯಚೂರು ಜಿಲ್ಲೆಯ ಲಿಂಗಸೂಗೂರು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆರೋಪಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯುವ ಕುರಿತು ಮಾತನಾಡಿದಾಗ ಆಕೆ ವಿಚ್ಛೇದನ ನೀಡಲು ಒಪ್ಪಿಲ್ಲ. ಇದರಿಂದ ಶರಣಪ್ಪ ಪತ್ನಿಯ ತಂದೆ ಹಾಗೂ ಮೂರು ಜನ ಸಂಬಂಧಿಕರಿಗೆ ನ್ಯಾಯ ಪಂಚಾಯಿತಿ ಮಾಡಲು ನಾರಾಯಣಪುರದ ಮನೆಗೆ ಕರೆಸಿಕೊಂಡಿದ್ದಾನೆ. ನಂತರ ನಾಲ್ವರನ್ನು ಮನೆಯಲ್ಲಿ ಕೂಡಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಾಗಿಲಿಗೆ ಕೀಲಿ ಹಾಕಿ ಹೊರಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಶೇ40ರಷ್ಟು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ನಾರಾಯಣಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.