
ಯಾದಗಿರಿ: ‘ಜನನ ಸಮಯ ಮತ್ತು ಆನಂತರದ ಏಳು ದಿನಗಳಲ್ಲಿ ಸಮರ್ಪಕ ಆರೈಕೆ, ಕ್ರಮ ಬದ್ಧವಾಗಿ ಎದೆಹಾಲು ಉಣಿಸಿ, ಸ್ವಚ್ಛತೆಯ ಪಾಲನೆ ಮಾಡಿ, ತಾಯಿಗೆ ಮಗುವಿನ ಆರೈಕೆ ಬಗ್ಗೆ ತಿಳಿವಳಿಕೆ ಮೂಡಿಸಿ, ಅವುಗಳ ಪಾಲನೆ ಮಾಡಿಸುವಲ್ಲಿ ಯಶಸ್ವಿಯಾದರೆ ನವಜಾತ ಶಿಶುಗಳ ಮರಣವನ್ನು ಶೂನ್ಯಕ್ಕೆ ತರಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಮಹೇಶ ಬಿರಾದಾರ ಹೇಳಿದರು.
ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಎಂಸಿಎಚ್) ಗುರುವಾರ ಎಂಸಿಎಚ್ ಆಯೋಜಿಸಿದ್ದ ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಎನ್‌ಆರ್‌ಎಚ್ಎಸ್ ಅನ್ವಯ ಒಂದು ಸಾವಿರ ಮಕ್ಕಳಲ್ಲಿ 25 ಶಿಶುಗಳು ಸಾವನ್ನಪ್ಪುತ್ತಿವೆ. ಇದು ನವಜಾತ ಶಿಶುಗಳ ಆರೈಕೆ ಸವಾಲಿನದ್ದು ಎಂಬುದನ್ನು ಪ್ರತಿನಿಧಿಸುತ್ತದೆ. ಜನಿಸಿದ ಏಳು ದಿನಗಳು ಶಿಶುವಿಗೆ ನಿರ್ಣಾಯಕ ಅವಧಿಯಾಗಿದೆ. ಆ ಅವಧಿಯಲ್ಲಿ ಸರಿಯಾಗಿ ಎದೆಹಾಲು ಉಣಿಸಿ, ವೈಜ್ಞಾನಿಕವಾಗಿ ಆರೈಕೆ ಮಾಡಿದರೆ ಮರಣವನ್ನು ತಪ್ಪಿಸಬಹುದು’ ಎಂದರು.
‘ಕಡಿಮೆ ತೂಕ, ಅವಧಿ ಪೂರ್ಣ ಜನನ, ಸೋಂಕು, ಎದೆಹಾಲು ಉಣಿಸುವ ಬಗ್ಗೆ ತಾಯಿಗೆ ತಿಳಿವಳಿಕೆ ಇಲ್ಲದೆ ಇರುವುದು, ಸ್ವಚ್ಛತೆ ಕಾಪಾಡದ ಮಗುವಿನ ಸ್ಪರ್ಶದಂತಹ ಹಲವು ಕಾರಣಗಳಿಂದಾಗಿ ಜನಿಸಿದ 7, 25 ದಿನಗಳಲ್ಲಿ ಮಕ್ಕಳು ಸಾವನ್ನಪ್ಪುತ್ತಿವೆ. ಈ ಬಗ್ಗೆ ನರ್ಸ್, ಪೋಷಕರು ಜಾಗೃತರಾಗಿ ಇರಬೇಕು’ ಎಂದು ಹೇಳಿದರು.
‘ಜನಿಸಿದ ತಕ್ಷಣ ಮಗುವನ್ನು ಬೆಚ್ಚಗೆ ಇರಿಸಬೇಕು. ಇಲ್ಲದೆ ಇದ್ದರೆ ಹೈಪೊಗ್ಲಿಸಿಮಿಯಾಗೆ ತುತ್ತಾಗಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಶಾ ಕಾರ್ಯಕರ್ತೆಯರು, ಪಿಎಚ್‌ಸಿ ಅಧಿಕಾರಿಗಳು ಆಸ್ಪತ್ರೆಯಿಂದ ಮನೆಗೆ ಮರಳಿದ ಮಗುವಿನ ಆರೋಗ್ಯದ ಮೇಲೆ ಸದಾ ನಿಗಾ ಇರಿಸಬೇಕು. 3ನೇ, 7ನೇ, 18ನೇ, 24ನೇ ದಿನಕ್ಕೆ ಭೇಟಿ ಕೊಟ್ಟು, ಆರೈಕೆ ಹಾಗೂ ಸ್ವಾಸ್ಥ್ಯದ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು’ ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಕುಮಾರ ಅಂಗಡಿ ಮಾತನಾಡಿ, ‘ಸಪ್ತಾಹ ಕಾರ್ಯಕ್ರಮದಲ್ಲಿನ ಆರೈಕೆಯ ವಿಧಾನಗಳನ್ನು ವರ್ಷಪೂರ್ತಿ ಪಾಲನೆಯಾಗಬೇಕು. ಮೊದಲ ಒಂದು ವಾರದಲ್ಲಿ ನಂಜು ಆಗದಂತೆ ನೋಡಿಕೊಂಡು, ಪ್ರತಿ ಬಾರಿ ಮಗುವನ್ನು ಮುಟ್ಟುವಾಗ ಕೈಯನ್ನು ಸ್ವಚ್ಛ ಮಾಡಿಕೊಳ್ಳಬೇಕು’ ಎಂದರು.
‘ವೈದ್ಯರ ಮೇಲೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಮಾಜಮುಖಿಯಾಗಿದ್ದು, ಸಮಾಜದ ಜೊತೆಗೆ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದು ಸಲಹೆ ನೀಡಿದರು.
‘ಯಿಮ್ಸ್’ ವೈದ್ಯಕೀಯ ವಿದ್ಯಾರ್ಥಿಗಳು ಎದೆಹಾಲು ಉಣಿಸುವ, ಶಿಶು ಆರೈಕೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ, ಆರ್‌ಸಿಎಚ್ಒ ಡಾ. ಮಲ್ಲಪ್ಪ, ವಿಶೇಷ ಅಧಿಕಾರಿ, ಸಹಾಯಕ ಪ್ರಾಧ್ಯಾಪಕರು ಡಾ.ನವಿನ್, ಡಾ. ಹಲ್ತಾಫ್, ಡಾ. ಸಚಿನ್, ಡಾ ಸುಮನ್ ಉಪಸ್ಥಿತರಿದ್ದರು.
ಮಕ್ಕಳ ಆಸ್ಪತ್ರೆಯು ಎಸ್‌ಎನ್‌ಸಿಯುನಿಂದ ನವಜಾತ ಶಿಶು ಆರೈಕೆ ಘಟಕವಾಗಿ (ಎನ್‌ಐಸಿಯು) ಮೇಲ್ದರ್ಜಗೆ ಏರಿದೆ. 10 ಹಾಸಿಗೆಗಳಿಂದ 30ರ ಗಡಿ ದಾಟಿದೆ. ಚಿಕಿತ್ಸಾ ಸೇವೆಗಳಲ್ಲಿಯೂ ಸುಧಾರಣೆಯಾಗಿದೆ– ಡಾ.ಕುಮಾರ ಅಂಗಡಿ, ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ
‘ಸದಾ ಹೊಸತು ಕಲಿಯಿರಿ’
‘ಪ್ರಸ್ತುತ ದಿನಗಳಲ್ಲಿ ಯುವ ವೈದ್ಯರ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಚಿಕಿತ್ಸಾ ವಿಧಾನದಲ್ಲಿ ಹೊಸ ಪದ್ಧತಿಗಳು ಬರುತ್ತಿವೆ. ನಮ್ಮ ಓದಿನ ದಿನಗಳಲ್ಲಿ ಇದ್ದತಂಹ ಚಿಕಿತ್ಸಾ ವಿಧಾನಗಳು ಈಗ ಇಲ್ಲ. ಎಂಬಿಬಿಎಸ್ ಪದವಿ ಮುಗಿದರೂ ಕಲಿಯುವುದು ಮುಗಿಯುವುದಿಲ್ಲ’ ಎಂದು ಡಿಎಚ್‌ಒ ಡಾ.ಮಹೇಶ ಬಿರಾದಾರ ಹೇಳಿದರು.
‘ವೈದ್ಯಕೀಯ ಕ್ಷೇತ್ರದಲ್ಲಿ ಸದಾ ಹೊಸತನ್ನು ಕಲಿಯಬೇಕು. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡಿ ತಾಯಿ– ಮಕ್ಕಳ ವೃದ್ಧರ ಆರೋಗ್ಯ ಕಾಪಾಡಬೇಕು. ಜೀವನದ ಕೊನೆ ಉಸಿರು ಇರುವವರೆಗೆ ಸೇವೆ ಮಾಡುವ ವೃತ್ತಿ ನಮ್ಮದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.