ADVERTISEMENT

ದೇಗುಲಕ್ಕೆ ಅನ್ಯ ಧರ್ಮದ ಆಡಳಿತಾಧಿಕಾರಿ ನಿಯೋಜನೆ: ವಿಶ್ವಕರ್ಮ ಮಹಾ ಒಕ್ಕೂಟ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:49 IST
Last Updated 9 ಜನವರಿ 2026, 5:49 IST
ಯಾದಗಿರಿಯಲ್ಲಿ ಈಚೆಗೆ ವಿಶ್ವಕರ್ಮ ಮಹಾ ಒಕ್ಕೂಟದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಯಾದಗಿರಿಯಲ್ಲಿ ಈಚೆಗೆ ವಿಶ್ವಕರ್ಮ ಮಹಾ ಒಕ್ಕೂಟದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಯಾದಗಿರಿ: ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಹುದ್ದೆಗೆ ಅನ್ಯಧರ್ಮದ ಅಧಿಕಾರಿಯನ್ನು ನಿಯೋಜಿಸಿ ಧಾರ್ಮಿಕ ದತ್ತಿ ಇಲಾಖೆಯ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ವಿಶ್ವಕರ್ಮ ಮಹಾ ಒಕ್ಕೂಟದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.

ತಿಂಥಣಿ ಮೌನೇಶ್ವರ ದೇವಸ್ಥಾನವು ಇಲಾಖೆಯ ‘ಎ’ ಗ್ರೇಡ್‌ ಪಟ್ಟಿಯಲ್ಲಿದೆ. ಇಲಾಖೆಯ ಅಧಿನಿಯಮ 1997 ಪ್ರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಗೆ ಆಯುಕ್ತ, ಆಡಳಿತ ಅಧಿಕಾರಿ, ಇತರರನ್ನು ನೇಮಕ ಮಾಡಬೇಕಾದರೆ ಕಾಲಂ 7 ಪ್ರಕಾರ ಹಿಂದೂಗಳಾಗಿರಬೇಕು. ಆದರೆ, ಮೌನೇಶ್ವರ ದೇವಸ್ಥಾನಕ್ಕೆ ಕಾಯ್ದೆ ಉಲ್ಲಂಘನೆ‌ ಮಾಡಿ ಹಿಂದೂವಲ್ಲದ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅನ್ಯ ಧರ್ಮದ ಅಧಿಕಾರಿಯನ್ನು ನಿಯೋಜಿಸಿರುವುದು ತಡವಾಗಿ ಗಮನಕ್ಕೆ ಬಂದಿದೆ. ಕ್ಷೇತ್ರದ ವಿಚಾರವಾಗಿ ಈಗಿರುವ ಅಧಿಕಾರಿಯು ಸ್ಥಳೀಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ದೇವಸ್ಥಾನ ಸಮಿತಿ ಕಾಲವಧಿ ಎರಡು ತಿಂಗಳಾದರೂ ಜಿಲ್ಲಾಡಳಿತವು ವ್ಯವಸ್ಥಾಪನ ಸಮಿತಿ ನೇಮಕ ಮಾಡಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯೂ ಆಗಿದೆ ಎಂದು ಮುಖಂಡರು ದೂರಿದ್ದಾರೆ.

ADVERTISEMENT

ದಕ್ಷಿಣ ಕಾಶಿ ಖ್ಯಾತಿಯ ತಿಂಥಣಿ ಮೌನೇಶ್ವರರ ಜಾತ್ರೆ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ. ಜಿಲ್ಲಾಡಳಿತವು ಆದಷ್ಟು ಬೇಗ ದೇವಸ್ಥಾನದ ಅಭಿವೃದ್ದಿ ಧಾರ್ಮಿಕ ಆಚರಣೆಯುಳ್ಳ ಸಮಿತಿ ರಚಿಸಬೇಕು. ಆಡಳಿತದ ಹಿತದೃಷ್ಟಿಯಿಂದ ಸುರಪುರ ತಹಶೀಲ್ದಾರ್ ಆಡಳಿತಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಕೋರಿದ್ದಾರೆ.

ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಮನೋಹರ ಪತ್ತಾರ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಕೌಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.