ADVERTISEMENT

ಗ್ರಾಹಕರ ಹಿತರಕ್ಷಣಾ ಮಸೂದೆ ತಿದ್ದುಪಡಿಗೆ ವಿರೋಧಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:10 IST
Last Updated 4 ಜನವರಿ 2019, 16:10 IST
ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿಗೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿಗೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಯಾದಗಿರಿ: ದೇಶದ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿರುವ ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿಗೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಮಾತನಾಡಿ, 1986ರಲ್ಲಿ ಸಂಸತ್ ಸಭೆಯಲ್ಲಿ ಮಂಡಿಸಲಾದ ಗ್ರಾಹಕ ಹಿತರಕ್ಷಣಾ ಮಸೂದೆಯಲ್ಲಿ ವೈದ್ಯಕೀಯ ವೃತ್ತಿಯು ಒಳಗೊಂಡಿರಲಿಲ್ಲ. 1994ರಲ್ಲಿ ವೈದ್ಯಕೀಯ ವೃತ್ತಿಯನ್ನು ಸೇರ್ಪಡೆಗೊಳಿಸಲಾಯಿತು. ಇದೀಗ 20–12–2018ರಂದು ಅನುಮೋದಿಸಿದ ತಿದ್ದುಪಡಿಗಳು ದೇಶದ ಆರೋಗ್ಯ ಕ್ಷೇತ್ರಕ್ಕೆ ಮಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕಾಯ್ದೆ ತಿದ್ದುಪಡಿಯಿಂದಾಗಿ ಜಿಲ್ಲಾ ಗ್ರಾಹಕರ ಹಿತ ರಕ್ಷಣಾ ವೇದಿಕೆಯ ವ್ಯಾಪ್ತಿ ₹20 ಲಕ್ಷದಿಂದ 1 ಕೋಟಿಗೆ ಏರಿಕೆಯಾಗಲಿದೆ. ರಾಜ್ಯ ಗ್ರಾಹಕ ಹಿತರಕ್ಷಣಾ ವೇದಿಕೆ ವ್ಯಾಪ್ತಿಯನ್ನು ₹1 ಕೋಟಿಯಿಂದ 10ಕೋಟಿಗೆ ಏರಿಸಲಾಗಿದೆ. ಈ ತಿದ್ದುಪಡಿಯಿಂದಾಗಿ ಗ್ರಾಹಕರ ಹಿತರಕ್ಷಣಾ ವೇದಿಕೆಯಲ್ಲಿ ನ್ಯಾಯಾಧೀಶರ ಸದಸ್ಯತ್ವ ಕಡ್ಡಾಯ ಇಲ್ಲ. ತೊಂದರೆಗೊಳಗಾದವರು ಅಲ್ಲದೆ ಘಟನೆಗೆ ಸಂಬಂಧವಿಲ್ಲದ ಇತರೆ ಸಂಘಟನೆಗಳೂ ಕೂಡಾ ದೂರು ಸಲ್ಲಿಸಲು ಅವಕಾಶವಿದೆ. ಇದು ಸುಳ್ಳು ದೂರುಗಳಿಗೆ ಕಾರಣವಾಗುತ್ತದೆ ಆದ್ದರಿಂದ ತಿದ್ದುಪಡಿ ಹಿಂಪಡೆಯಬೇಕೆಂದು ಆಗ್ರಹಿಸಿದರು.

ADVERTISEMENT

ಕಾರಣವಿಲ್ಲದೆ ಹಣಕ್ಕಾಗಿ ಮತ್ತು ಬೆದರಿಕೆ ತಂತ್ರವಾಗಿ ವೈದ್ಯರ ಮತ್ತು ಆಸ್ಪತ್ರೆಯಗಳ ಮೇಲೆ ವ್ಯಾಜ್ಯಗಳು ಈಗಾಗಲೇ ನಡೆಯುತ್ತಿವೆ. ವೈದ್ಯರ ದಾಖಲೆಗಳ ಅಗತ್ಯಕ್ಕಾಗಿ ಮತ್ತು ಸ್ವರಕ್ಷಣೆಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಇದರಿಂದ ಪರೀಕ್ಷಾ ಮತ್ತು ಚಿಕಿತ್ಸಾ ವೆಚ್ಚ ದುಬಾರಿಯಾಗಲಿವೆ. ಆಸ್ಪತ್ರೆಗಳನ್ನು ವೈದ್ಯರ ಬದಲು ದೊಡ್ಡ ದೊಡ್ಡ ಉದ್ದಿಮೆದಾರರು ಲಾಭಕ್ಕಾಗಿ ಆರಂಭಿಸುತ್ತಿದ್ದಾರೆ. ಬೇರೆ ಯಾವುದೇ ಕ್ಷೇತ್ರಕ್ಕಿಂತ ಕೇವಲ ಆರೋಗ್ಯ ಕ್ಷೇತ್ರಕ್ಕೆ ಅತಿ ಹೆಚ್ಚು ಮಾರಕವಾಗಿರುವ ಈ ತಿದ್ದುಪಡಿಯನ್ನು ಕೈ ಬಿಡಬೇಕು. ಇಂತಹ ಮಾರಕ ಮಸೂದೆಯನ್ನು ಜಾರಿಗೆ ತಂದು ಮುಂದಿನ ದಿನಗಳಲ್ಲಿ ದೇಶದ ಆರೋಗ್ಯ ಕ್ಷೇತ್ರವನ್ನು ಹದಗೆಡಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಾ.ವಿಜಯ ಕುಮಾರ್, ಪ್ರಶಾಂತ ಬಾಸುತ್ಕರ್, ಡಾ. ಜಿ.ಡಿ. ಹುನುಗುಂಟಿ, ಡಾ.ಪ್ರಸನ್ನ ಪಾಟೀಲ್, ಡಾ.ರಾಜೇಂದ್ರ, ಡಾ. ಶೃತಿ ರೆಡ್ಡಿ, ಡಾ. ಚಂದ್ರಕಾಂತ ಪೂಜಾರಿ, ಸುರೇಶರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.