ಹುಬ್ಬಳ್ಳಿ: ಯುಪಿಎ ಅಂಗಪಕ್ಷಗಳಲ್ಲಿ ಒಗ್ಗಟ್ಟಿಲ್ಲ. ಜೊತೆಗೆ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಅವರಲ್ಲಿ ಒಮ್ಮತವಿಲ್ಲ. ಹೀಗಿರುವಾಗ ರಾಹುಲ್‌ಗೆ ಮೈತ್ರಿಕೂಟ ರಚಿಸುವ ಹೊಣೆ ವಹಿಸಿರುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ವರ್ಸಸ್ ಆಲ್ ಅದರ್ಸ್’ ಎಂಬುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫಲ ನೀಡುವುದಿಲ್ಲ. ಮತ್ತೊಮ್ಮೆ ಮೋದಿ ಈ ದೇಶದ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ದತ್ತ ಮೊದಲು ದಾಖಲೆ ನೀಡಲಿ:‘ಉತ್ತರ ಕರ್ನಾಟಕಕ್ಕೆ ಎಚ್.ಡಿ.ದೇವೇಗೌಡರ ಕೊಡುಗೆ’ ಕುರಿತು ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಹೊರ ತಂದಿರುವ 50 ಪುಟಗಳ ಹೊತ್ತಿಗೆಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಅದನ್ನು ಮೊದಲು ನಮಗೆ ತಲುಪಿಸಲಿ. ಆ ಮೇಲೆ ಅದರ ಕುರಿತು ಚರ್ಚಿಸೋಣ ಎಂದರು.
ಸಹಕರಿಸಲು ಮನವಿ:ನಿರಂತರ ಮಳೆಯಾಗುತ್ತಿರುವುದರಿಂದ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ತಕ್ಷಣ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಸಿಆರ್‌ಎಫ್ ಅನುದಾನ ಮತ್ತು ಬಿಆರ್‌ಟಿಎಸ್, ಟೆಂಡರ್ ಶ್ಯೂರ್ ಕಾಮಗಾರಿಗಳು ಏಕಕಾಲಕ್ಕೆ ನಡೆಯುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಸಹಜ. ಕಾಮಗಾರಿ ಮುಗಿಯುವವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರವು ಅವಳಿ ನಗರದ ರಸ್ತೆಗಳ ಅಭಿವೃದ್ಧಿಗೆ ₹ 430 ಕೋಟಿ ಸಿಆರ್‌ಎಫ್ ಅನುದಾನ ನೀಡಿದೆ. ಆದರೆ, ರಾಜ್ಯ ಸರ್ಕಾರವು ಟೆಂಡರ್ ಕರೆಯದೇ ಇರುವುದರಿಂದ ಹಾಗೂ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದಿರುವುದರಿಂದ ರಸ್ತೆಗಳ ಸುಧಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.