ADVERTISEMENT

‘ಗುಂಪು ಅಧ್ಯಯನ’ ಸಿದ್ಧತೆ ಹೀಗಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜನವರಿ 2016, 19:30 IST
Last Updated 24 ಜನವರಿ 2016, 19:30 IST
‘ಗುಂಪು ಅಧ್ಯಯನ’ ಸಿದ್ಧತೆ ಹೀಗಿರಲಿ
‘ಗುಂಪು ಅಧ್ಯಯನ’ ಸಿದ್ಧತೆ ಹೀಗಿರಲಿ   

ಗುಂಪು ಅಧ್ಯಯನಕ್ಕೆ ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳ ಗುಂಪು ಅಗತ್ಯ. ಈ ಗುಂಪು 2ರಿಂದ 4 ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದರೆ ಉತ್ತಮ. ಈ ವಿದ್ಯಾರ್ಥಿಗಳು ‘ಅಧ್ಯಯನ’ಕ್ಕೆ ಸಂಬಂಧಿಸಿ ಸಮಾನ ಮನಸ್ಕತೆ ಹೊಂದಿರಬೇಕು. ಯಾವ ವಿಷಯದ ಕುರಿತು, ಯಾವಾಗ, ಎಲ್ಲಿ ಚರ್ಚಿಸಬೇಕು? ಅದಕ್ಕೆ ಏನೇನು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು? ಪೂರ್ವಭಾವಿ ಅಧ್ಯಯನ ಹೇಗಿರಬೇಕು ಎಂಬುದನ್ನು ಸರಿಯಾಗಿ ಯೋಜಿಸಿಕೊಳ್ಳಬೇಕು.

ಗುಂಪು ಅಧ್ಯಯನದಿಂದ ನಿಮ್ಮ ವೈಯಕ್ತಿಕ ಅಧ್ಯಯನ ಕ್ರಮಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಗುಂಪು ಅಧ್ಯಯನ ಕೈಗೊಳ್ಳಲು ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಮುಖ್ಯ. ಈ ಸ್ಥಳ ನಿಮ್ಮ ತರಗತಿ, ನಿಮ್ಮ ಅಥವಾ ಸ್ನೇಹಿತನ ಮನೆ, ದೇಗುಲದ ಆವರಣ, ಗದ್ದೆಯಲ್ಲಿರುವ ಮರದ ನೆರಳು, ಉದ್ಯಾನ ಹೀಗೆ ಯಾವುದಾದರೊಂದು ಶಾಂತಿಯುತ, ಗೋಜಲು, ಗದ್ದಲಗಳಿಂದ ಮುಕ್ತವಾದ ಸ್ಥಳವಾಗಿರಬೇಕು.

ಗುಂಪು ಅಧ್ಯಯನಕ್ಕೆ ಸಾಮಾನ್ಯವಾಗಿ ಬೆಳಗಿನ 10ರಿಂದ ಮಧ್ಯಾಹ್ನ 1ರವರೆಗಿನ ಅಥವಾ ಸಂಜೆ 5ರಿಂದ 8ರವರೆಗಿನ ಅವಧಿ ಉತ್ತಮವಾದುದು. ವೇಳೆಗೆ ಅನುಗುಣವಾಗಿ ಸರಿ ಹೊಂದುವ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಗುಂಪು ಅಧ್ಯಯನದ ಸ್ಥಳದಲ್ಲಿ ಗಾಳಿ, ಬೆಳಕು, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ನೆಲದ ಮೇಲೆ ಸರಿಯಾದ ಭಂಗಿಯಲ್ಲಿ ವೃತ್ತಾಕಾರದಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುವಂತೆ ಕುಳಿತುಕೊಂಡು ಚರ್ಚೆ ನಡೆಸಬೇಕು. ಕೂರಲು ಪೀಠೋಪಕರಣಗಳಿದ್ದರೂ ಆದೀತು.

ಈ ನಿಯಮಗಳನ್ನು ಪಾಲಿಸಿ
* ಗುಂಪು ಅಧ್ಯಯನಕ್ಕೆ ಹಾಜರಾಗುವ ಮುನ್ನ ಪೂರ್ವನಿರ್ಧರಿತ ವಿಷಯಕ್ಕೆ ಸಂಬಂಧಿಸಿ, ನಿಮ್ಮ ಬಳಿ ಇರುವ ಪಠ್ಯವಸ್ತು, ಅಧ್ಯಯನ ಸಾಮಗ್ರಿಗಳನ್ನು ಮರೆಯದೇ ಕೊಂಡೊಯ್ಯಿರಿ.

* ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ವಿಷಯ ಮಂಡಿಸಿ, ಪ್ರಶ್ನಿಸಿ, ಉತ್ತರಿಸಿ. ವಿಷಯ ಮಂಥನದಲ್ಲಿ ಪಾಲ್ಗೊಳ್ಳದೇ ‘ಮೌನಿ’ಯಾದರೆ ‘ಗುಂಪು ಅಧ್ಯಯನ ತನ್ನ ಮಹತ್ವ ಕಳೆದುಕೊಳ್ಳುತ್ತದೆ.

* ಚರ್ಚೆಯಲ್ಲಿ ಇತರರಿಗೂ ಪಾಲ್ಗೊಳ್ಳಲು ಅವಕಾಶ ನೀಡಿ. ಸಹಪಾಠಿ, ಸ್ನೇಹಿತರ ಅಭಿಪ್ರಾಯ, ಪ್ರಶ್ನೆ, ಉತ್ತರಗಳನ್ನು ಗೌರವಿಸಿ.

*ಸ್ನೇಹಿತರ ತಪ್ಪುಗಳನ್ನು ಮರೆಯದೇ ಸರಿಪಡಿಸಿ. ಆದರೆ, ಆ ಸರಿಪಡಿಸುವಿಕೆ ಅವರ ಮನನೋಯಿಸದಿರಲಿ.

* ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಅಗತ್ಯವಿದ್ದರೆ ಹೆಚ್ಚಿನ ವಿವರಗಳನ್ನು ಸೇರಿಸಿ. ಉತ್ತರಕ್ಕೆ ಎಲ್ಲರೂ ‘ಓಕೆ’ ಅಂದಾಗ ಮುಂದಿನ ಪ್ರಶ್ನೆಗೆ ಹೋಗಿ.

*ಆಯಾ ಪರೀಕ್ಷಾ ಕ್ರಮದ ಅಗತ್ಯಕ್ಕೆ ತಕ್ಕಂತೆ ಚರ್ಚೆಯಲ್ಲಿ ವಸ್ತುನಿಷ್ಠ, ಸಂಕ್ಷಿಪ್ತ ಹಾಗೂ ಸವಿವರ ಮಾದರಿಯ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಉತ್ತರ ಕಂಡುಕೊಳ್ಳಿ.

*ತಕ್ಷಣವೇ ಹೊಳೆದ ವಿಷಯ ಸಂಬಂಧಿತ ‘ವಿಚಾರ ಪ್ರಚೋದಕ’ ಪ್ರಶ್ನೆ ಚರ್ಚೆಯನ್ನು ಆಸಕ್ತಿದಾಯಕವಾಗಿಸುತ್ತದೆ. ಸಂದರ್ಭೋಚಿತ ಸಹ ಸಂಬಂಧ, ಉದಾಹರಣೆಗಳು ವಿಷಯ ಧಾರಣೆಯ ಪ್ರಮಾಣ ಹೆಚ್ಚಿಸುತ್ತವೆ.

*ಸರಿ ಉತ್ತರ ಹೇಳಿದೆ ಎಂಬ ‘ಅಹಂಕಾರ’ ತಪ್ಪು ಉತ್ತರ ಹೇಳಿದೆನೆಂಬ ‘ಕೀಳರಿಮೆ’ ಬೇಡ. ನಿಮಗೆ ಕಠಿಣವೆನಿಸಿದ ಸಮಸ್ಯೆಗೆ ನಿಮ್ಮ ಸ್ನೇಹಿತರ ಬಳಿ ಪರಿಹಾರವಿರಬಹುದು.

*ಚರ್ಚೆಯಲ್ಲಿ ತೂರಿಬರುವ ಹೊಸ ವಿಷಯಾಂಶಗಳನ್ನು, ಮುಖ್ಯಾಂಶಗಳನ್ನು ಮರೆಯದೇ ಟಿಪ್ಪಣಿ ಮಾಡಿಕೊಳ್ಳಿ.

*ಚರ್ಚೆಯಲ್ಲಿ ವಾದ– ವಿವಾದ ಬೇಡ. ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳಿ. ಸಮಸ್ಯೆಯನ್ನು ತಾರ್ಕಿಕವಾಗಿ ಪರಿಹರಿಸಿಕೊಳ್ಳಿ.

ಚರ್ಚೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಾರೆ. ‘ಪಠ್ಯಕ್ರಮ’ ಮೀರಿದ ಅನಗತ್ಯ ವಿಷಯಗಳ ಕುರಿತು ಮಾತನಾಡುತ್ತಾರೆ. ಇದರಿಂದ ಸಮಯ ವ್ಯರ್ಥವಾಗಿ ಚರ್ಚೆ ಹಳಿತಪ್ಪಿ ‘ಹಾಳು ಹರಟೆ’ ಆಗುವ ಸಾಧ್ಯತೆ ಇದೆ. ಇಂಥಹ ಸ್ನೇಹಿತರನ್ನು ನಿಮ್ಮ ಗುಂಪಿಗೆ ಸೇರಿಸದರಿ.

ವಿಷಯ ಮನನಕ್ಕೆ ಸಹಕಾರಿ
ಪರೀಕ್ಷೆ ಸಮೀಪಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಮನನ ಮಾಡಿಕೊಳ್ಳಲು ‘ಗುಂಪು ಅಧ್ಯಯನ’ ಒಂದು ಉತ್ತಮ ವಿಧಾನ. ಇದು ವೈಯಕ್ತಿಕ ಅಧ್ಯಯನದ ಏಕತಾನತೆಯನ್ನು ಹೋಗಲಾಡಿಸಿ, ಬಗೆಹರಿಯದ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡು, ಅಧ್ಯಯನದತ್ತ ಆತ್ಮವಿಶ್ವಾಸ, ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಪ್ರಕಾಶ ಮೆಳವಂಕಿ, ಮುಖ್ಯಶಿಕ್ಷಕ,
ಸರ್ಕಾರಿ ಪ್ರೌಢಶಾಲೆ ಮಾಸ್ತಮರಡಿ (ಬೆಳಗಾವಿ ಜಿಲ್ಲೆ)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.