ADVERTISEMENT

ಓದಿನ ಗೀಳು ಒಳ್ಳೆಯದೇ?

ಡಿ.ಎಂ.ಹೆಗಡೆ
Published 19 ಜನವರಿ 2025, 20:59 IST
Last Updated 19 ಜನವರಿ 2025, 20:59 IST
   

ನನ್ನ ಮಗ ವಿಪರೀತ ಓದುತ್ತಾನೆ. ಯಾರೊಂದಿಗೂ ಮಾತಾಡುವುದಿಲ್ಲ. ಊಟ, ನಿದ್ದೆ ಯಾವ ಕಡೆಯೂ ಗಮನವಿಲ್ಲ. ಅಂಕಗಳ ಬಗ್ಗೆ ಮೊದಲಿನಿಂದಲೂ ಒತ್ತಡ ಹಾಕದಿದ್ದರೂ ಗೀಳು ಹಿಡಿದವನಂತೆ ಸದಾ ಓದುತ್ತಲೇ ಇರುತ್ತಾನೆ. ಅಭ್ಯಾಸದಲ್ಲಿ ಸದಾ ಮುಂದಿದ್ದಾನೆ. ಯಾಕೆ ಹೀಗೆ?

ADVERTISEMENT

ಹಾಗೆ ನೋಡಿದರೆ ಇದು ಪಾಲಕರಿಗೆ ಖುಷಿಯಾಗಬೇಕಾದ ವಿಷಯ. ಆದರೆ ಇಲ್ಲಿ ಹಾಗಾಗುತ್ತಿಲ್ಲ! ಮಕ್ಕಳು ಅಸಹಜವಾಗಿ ವರ್ತಿಸಿದರೆ ಆತಂಕವಾಗಬೇಕಾದದ್ದು ಸಹಜ. ಅವನು ಮೊದಲಿನಿಂದಲೂ ಹಾಗೆಯೇ ಇದ್ದಾನಾ? ಅಥವಾ ಪರೀಕ್ಷೆ ಹತ್ತಿರ ಬಂದಂತೆಯೇ ಹೀಗಾಗಿದ್ದಾನಾ ಎನ್ನುವುದನ್ನು ಗಮನಿಸಿ. ಕೇವಲ  ಅಂಕಗಳಿಕೆಯಷ್ಟೇ ಶಿಕ್ಷಣದ ಉದ್ದೇಶವಲ್ಲ. ಹೆಚ್ಚು ಅಂಕಗಳಿಸಿದವರೆಲ್ಲರೂ ಮುಂದೆ ಜೀವನದಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಹಾಗಿಲ್ಲ. 

ಪರೀಕ್ಷೆ ಎನ್ನುವುದು ಒಂದು ಘಟ್ಟ. ಫಲಿತಾಂಶವೇ ಕೊನೆಯಲ್ಲ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡರೆ, ಅಂಕಗಳೂ ಸಾಕಷ್ಟು ಬರುತ್ತವೆ. ಮುಂದಿನ ಬದುಕಿನಲ್ಲಿಯೂ ಶಿಸ್ತಿನಿಂದ, ಸುಂದರ ಬದುಕು ಕಟ್ಟಿಕೊಳ್ಳಬಹುದು.ಶಿಸ್ತನ್ನು ಮೊದಲು ಮನಸ್ಸಿಗೂ ಅದರ ಮೂಲಕ ಶರೀರಕ್ಕೂ ಕಲಿಸಬೇಕಾಗುತ್ತದೆ. ಆರರ ಬುದ್ಧಿ ಅವರವತ್ತರವರೆಗೂ ಇರುತ್ತದೆ ಎನ್ನುತ್ತಾರೆ.

ಮಗನ ಉದಾಹರಣೆಯನ್ನು ಗಮನಿಸುವುದಾದರೆ ನೀವು ಒತ್ತಡ ಹಾಕದೇ ಇರಬಹುದು. ಬೇರೆಯವರಿಂದ ಅವನಿಗೆ ಒತ್ತಡ ಉಂಟಾಗಿದೆಯೇ, ಬೇರೆಯವರು ಅಂಕಗಳಿಸಿ ಬಿಡುತ್ತಾರೆ ಎನ್ನುವ ಕಾರಣಕ್ಕೆ ಆತಂಕಗೊಂಡಿದ್ದಾನೆಯೇ ಗಮನಿಸಿ.   ಅವನ ಮನಸ್ಸಿನಲ್ಲಿ ತಾನು ಯಾವಾಗಲೂ ಮೊದಲಿಗನಾಗಿರಬೇಕು. ಎಲ್ಲರಿಗಿಂತಲೂ ಹೆಚ್ಚು ಅಂಕಗಳಿಸಬೇಕು ಎನ್ನುವುದಿದೆ.  ತನಗೆ ಕಡಿಮೆ ಅಂಕ ಬಂದುಬಿಡಬಹುದೇನೋ ಎನ್ನು ಭಯವೂ ಶುರುವಾಗಿದೆ.ಈ ಭಯ ಒಳ್ಳೆಯದಲ್ಲ. ಅವನು ಮಾತನಾಡದೇ ಇರುವುದಕ್ಕೂ ಅವನೊಳಗಿನ ಆತಂಕವೇ ಕಾರಣವಾಗಿರಬಹುದು. 

 ಊಟ, ನಿದ್ದೆಗೆಟ್ಟು ಓದುವುದು ಸೂಕ್ತವಲ್ಲ. ಬೆಳೆಯುವ ಮಕ್ಕಳಿಗೆ ಸಮತೋಲನ ಆಹಾರ ಅಗತ್ಯ. ನಿರಂತರವಾಗಿ 10 ರಾತ್ರಿಗಳ ಕಾಲ ನಿದ್ರೆ ಮಾಡದೇ ಇದ್ದರೆ ಮನುಷ್ಯ ಸಾಯುತ್ತಾನೆ. ಇನ್ನು ಮೂರ್ನಾಲ್ಕು ರಾತ್ರಿ ಅಂದರೆ ಸತತವಾಗಿ 90 ತಾಸುಗಳಷ್ಟು ನಿದ್ರೆ ಮಾಡದೇ ಎಚ್ಚರವಾಗಿದ್ದರೆ ಮನುಷ್ಯನ ಮೆದುಳು ಭ್ರಮಾಧೀನಕ್ಕೆ ಒಳಗಾಗಬಹುದು.  

ಹಾಗಂತ ಹಗಲು ನಿದ್ರೆ ಮಾಡಿ ರಾತ್ರಿ ಇಡೀ ಓದುವುದೂ ಖಂಡಿತಾ ಒಳ್ಳೆಯದಲ್ಲ. ಹೀಗೆ ಮಾಡಿದರೆ ಅಲ್ಪಾಯುಷಿಗಳಾಗುತ್ತಾರೆ. ಬೇಗನೇ ಮುದುಕರಂತಾಗಿಬಿಡುತ್ತಾರೆ. ಇವೆಲ್ಲವನ್ನೂ ಅವನಿಗೆ ತಿಳಿಯುವ ಹಾಗೆ ವಿವರಿಸಿರಿ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಧನಾತ್ಮಕ ವಿಷಯಗಳನ್ನು ತಿಳಿಸಿರಿ. ಯಾವ ಕಾಲಕ್ಕೂ ʼಓದು ಒಕ್ಕಾಲು, ಬುದ್ಧಿ ಮುಕ್ಕಾಲು’.  ಓದಿದ ವಿಷಯವನ್ನು ಅನುಷ್ಠಾನಕ್ಕೆ ತಂದುಕೊಳ್ಳಲು ಬುದ್ಧಿ ಇರಬೇಕು. ನಮಗೆ ಗೊತ್ತಿರುವ ಬಹಳಷ್ಟು ವಿಷಯಗಳು ನಮ್ಮ ಉಪಯೋಗಕ್ಕೇ ಬರುವುದಿಲ್ಲ. ಅವುಗಳಿಂದ ನಮಗೇನೂ ಪ್ರಯೋಜನವಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.

ಈ ಜಗತ್ತು ಒಂದು ಲಯದಲ್ಲಿ ಸಾಗುತ್ತಿದೆ. ಹಾಗೆಯೇ ನಮ್ಮ ಬದುಕಿಗೂ ಒಂದು ಲಯದ ಅಗತ್ಯವಿದೆ. ಅವರವರ ಲಯವನ್ನು, ವೇಗವನ್ನು, ವಿಶೇಷತೆಯನ್ನು ಅವರವರು ಕಂಡುಕೊಳ್ಳಬೇಕು. ಅದು ಅವರವರ ಬದುಕಿನ ಗುರಿಯ ದಾರಿಯನ್ನು ಸ್ಪಷ್ಟಪಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.