ADVERTISEMENT

ತಂದೆಯ ಕಷ್ಟ ಕಂಡು ರಾತ್ರಿ 2 ಗಂಟೆಗೆ ಓದಲು ಏಳುತ್ತಿದ್ದೆ: ವಿಕಾಸನ ಮನದಾಳದ ಮಾತು

ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಟಾಪರ್ ವಿಕಾಸ

ಮಾಣಿಕ ಆರ್ ಭುರೆ
Published 28 ಏಪ್ರಿಲ್ 2019, 20:00 IST
Last Updated 28 ಏಪ್ರಿಲ್ 2019, 20:00 IST
ವಿಕಾಸ ಗೋಣೆ
ವಿಕಾಸ ಗೋಣೆ   

ಬಸವಕಲ್ಯಾಣ: ತಂದೆ ಕಾಶಪ್ಪ ಗೋಣೆ ಆಟೊ ಚಾಲನೆ ಮಾಡಿ ಸಂಸಾರದ ತಾಪತ್ರಯ ನೀಗಿಸುತ್ತಿರುವುದು ಹಾಗೂ ತಾಯಿ ಸವಿತಾ ಮನೆ ಕೆಲಸದ ಜತೆಗೆ ಬಟ್ಟೆ ಹೊಲೆಯುವ ಕಾಯಕ ಕೈಗೊಂಡು ನನ್ನ ಹಾಗೂ ಒಬ್ಬ ಸಹೋದರ, ಇಬ್ಬರು ಸಹೋದರಿಯರ ಶಿಕ್ಷಣದ ಖರ್ಚು ಭರಿಸುತ್ತಿರುವುದು ಕಂಡು ಇವರ ಕಷ್ಟಕ್ಕೆ ತಕ್ಕಂತೆ ಪ್ರತಿಫಲ ನೀಡಬೇಕು ಎಂದು ಯೋಚಿಸಿ ರಾತ್ರಿ 2 ಗಂಟೆಗೆ ಎದ್ದು ಓದುತ್ತಿದ್ದರಿಂದ ಪಿಯುಸಿ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಶೇ 95.66 ಅಂಕಗಳನ್ನು ಪಡೆದು ಜಿಲ್ಲೆಯಲ್ಲಿಯೇ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣ ಆಗಿದ್ದೇನೆ'

`ಸ್ವಂತ ಊರಾದ ಬಂದೇನವಾಜ್ ವಾಡಿಯಲ್ಲಿ 6ನೇ ತರಗತಿವರೆಗೆ ಓದಿ ನಂತರ 2 ಕಿ.ಮೀ ಅಂತರದ ಯರಂಡಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪೂರೈಸಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 92.64 ರಷ್ಟು ಅಂಕ ಬಂದಿತ್ತು. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಬೇಕು ಎಂಬ ಬಯಕೆ ಇತ್ತಾದರೂ ಮನೆಯಲ್ಲಿನ ಬಡತನದ ಕಾರಣ ಕಲಾ ವಿಭಾಗ ಆಯ್ದುಕೊಂಡು ಬಸವಕಲ್ಯಾಣದ ಪುಣ್ಯಕೋಟಿ ಕಾಲೇಜಿನಲ್ಲಿ ಪ್ರವೇಶ ಪಡೆದೆ. ಇಲ್ಲಿಯೂ ನನಗೆ ವರ್ಷಕ್ಕೆ ₹ 15 ಸಾವಿರ ಖರ್ಚು ತಗುಲಿತು. ಆದ್ದರಿಂದ ಸ್ವಸಹಾಯ ಗುಂಪುಗಳಿಂದ ನನ್ನ ತಾಯಿಯ ಹೆಸರಲ್ಲಿ ಸಾಲ ಪಡೆದುಕೊಂಡಿದ್ದೇವೆ. ಶಾಲೆಗೆ ರಜೆ ಇದ್ದಾಗ ಹೋಟಲ್‌ನಲ್ಲಿ ಕೆಲಸ ಮಾಡುತ್ತಿದ್ದೆ.

ಗ್ರಾಮದಲ್ಲಿನ 7 ಮಹಿಳಾ ಸ್ವಸಹಾಯ ಗುಂಪುಗಳ ಲೆಕ್ಕ ಬರೆಯುತ್ತೇನೆ. ಪ್ರತಿ ಸಂಘದವರು ತಿಂಗಳಿಗೆ ₹ 100 ಕೊಡುತ್ತಾರೆ. ಈ ಹಣದಲ್ಲಿ ಪುಸ್ತಕ ಖರೀದಿಸಿದೆ ಹಾಗೂ ಸಾಲ ತೀರಿಸುವಲ್ಲಿ ಸಹಾಯ ಮಾಡಿದ್ದೇನೆ. ಈಗಲೂ ₹ 25 ಸಾವಿರ ಸಾಲವಿದೆ'

ADVERTISEMENT

`ಊರಿನಿಂದ 12 ಕಿ.ಮೀ ಅಂತರದಲ್ಲಿನ ಕಾಲೇಜಿಗೆ ಬಸ್‌ನಲ್ಲಿ ಹೋಗಿ ಬರುತ್ತಿದೆ. ಸಂಜೆ ಮನೆಗೆ ಹೋದ ನಂತರ ರಾತ್ರಿ 10 ಗಂಟೆಯವರೆಗೆ ಓದುತ್ತಿದೆ. ಮತ್ತೆ 2 ಗಂಟೆಗೆ ಏಳುವುದು ರೂಢಿಯಾಗಿತ್ತು. ನಾನು ಏಳದಿದ್ದರೆ ತಂದೆ, ತಾಯಿ ಎಬ್ಬಿಸುತ್ತಿದ್ದರು. ಇಲ್ಲವೆ ಕಾಲೇಜಿನ ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಅವರು ಮೊಬೈಲ್ ಗೆ ಕರೆ ಮಾಡಿ ಎಚ್ಚರಿಸುತ್ತಿದ್ದರು. ಬೆಳಿಗ್ಗೆ 5
ಗಂಟೆಯವರೆಗೆ ಓದು ಸಾಗುತ್ತಿತ್ತು'

`ಎಸ್ಸೆಸ್ಸೆಲ್ಸಿಯಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಪಡೆದಿದ್ದರಿಂದ ನನಗೆ ಕಲಾ ವಿಭಾಗದಲ್ಲಿನ ಯಾವುದೇ ವಿಷಯ ಕ್ಲಿಷ್ಟಕರ ಅನಿಸಲಿಲ್ಲ. ಆದ್ದರಿಂದ ಕೋಚಿಂಗ್‌ಗೆ ಹೋಗಲಿಲ್ಲ. ಇದಲ್ಲದೆ ಕಾಲೇಜಿನಲ್ಲಿ 8 ಸಲ ಸರಣಿ ಪರೀಕ್ಷೆಗಳನ್ನು ತೆಗೆದುಕೊಂಡರು. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಲು ಹೇಳುತ್ತಿದ್ದರಿಂದ ಎಲ್ಲವೂ ಮನನ ಆಗಿತ್ತು. ಶಿಕ್ಷಣ ಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನದ ಜತೆಗೆ ಕನ್ನಡದಲ್ಲಿಯೂ 97 ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದೇನೆ. ಕಲಾ ವಿಭಾಗದಲ್ಲಿ ಬರೆಯುವುದು ಹೆಚ್ಚಿರುತ್ತದೆ. ಆದ್ದರಿಂದ ಓದಿರುವುದನ್ನು ಪ್ರತಿದಿನ ಬರವಣಿಗೆಯಲ್ಲಿ ಇಳಿಸುತ್ತಿದ್ದರಿಂದ ಎಷ್ಟೇ ಬರೆದರೂ ಆಯಾಸ ಅನಿಸುತ್ತಿರಲಿಲ್ಲ. ಇದರಿಂದ ಅಕ್ಷರಗಳು ಕೂಡ ದುಂಡಗಾದವು'

`ಆರ್ಥಿಕ ತೊಂದರೆ ಇದ್ದರೂ ಮಕ್ಕಳ ಓದು ನಿಲ್ಲಬಾರದು ಎನ್ನುವುದು ತಂದೆ ತಾಯಿಯ ಬಯಕೆಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿಗೆ ಪ್ರವೇಶ ಪಡೆಯಲು ವಂತಿಗೆ ಕೊಡಬೇಕಾಗುತ್ತದೆ ಎನ್ನುವುದು ಗೊತ್ತಾಗಿದೆ. ಆದರೆ, ಸರ್ಕಾರಿ ಕಾಲೇಜಿನಲ್ಲಿ ಪರಿಶಿಷ್ಟ ಪಂಗಡ(ಕೋಲಿ) ದವರಿಗೆ ರಿಯಾಯಿತಿ ಇದೆ. ಸರ್ಕಾರ ಪ್ರತಿಭಾವಂತರಿಗೆ ಶಿಷ್ಯವೇತನವನ್ನೂ ಕೊಡುವುದರಿಂದ ಸ್ವಲ್ಪ ಸಮಾಧಾನ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.