ADVERTISEMENT

ಸಿಬಿಎಸ್ಇ ಪರೀಕ್ಷಾ ಶುಲ್ಕ ಭಾರಿ ಏರಿಕೆ

ಪರಿಷ್ಕೃತ ಶುಲ್ಕ ಪಡೆದು ಹೆಸರು ನೋಂದಣಿಗೆ ಶಾಲೆಗಳಿಗೆ ಸೂಚನೆ

ಪಿಟಿಐ
Published 11 ಆಗಸ್ಟ್ 2019, 20:00 IST
Last Updated 11 ಆಗಸ್ಟ್ 2019, 20:00 IST
   

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು(ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದ್ದು, ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 50ರಿಂದ ₹1,200ಕ್ಕೆ ಏರಿಸಿದ್ದರೆ, ಸಾಮಾನ್ಯ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಏರಿಕೆಯಾಗಿದೆ. ಇದುವರೆಗೂ ₹ 750 ಪಾವತಿಸುತ್ತಿದ್ದ ವಿದ್ಯಾರ್ಥಿಗಳು, ಇನ್ನು ಮುಂದೆ ₹ 1,500 ಪಾವತಿಸಬೇಕಾಗಿದೆ.

ಪರೀಕ್ಷಾ ಮಂಡಳಿ ಈಗಾಗಲೇ ಶುಲ್ಕ ಪರಿಷ್ಕರಣೆ ಕುರಿತು ಆದೇಶ ಹೊರಡಿಸಿದೆ. ಹಳೆಯ ಶುಲ್ಕದಲ್ಲಿಈಗಾಗಲೇ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಸಿರುವ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವಂತೆ ಮಾನ್ಯತೆ ಪಡೆದ ಶಾಲೆಗಳಿಗೆ ಸೂಚಿಸಿದೆ.

ADVERTISEMENT

ವಲಸೆ ಶುಲ್ಕವನ್ನು ಈ ಮೊದಲು ಇದ್ದ ₹ 150ರಿಂದ ₹ 350ಕ್ಕೆ ಏರಿಸಲಾಗಿದೆ. ‘ಶುಲ್ಕ ಪರಿಷ್ಕರಣೆಯು 10 ಮತ್ತು 12ನೇ ತರಗತಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ‘ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು. ಶೇ 100ರಷ್ಟು ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ. ನಿಗದಿತ ದಿನಾಂಕಕ್ಕೆ ಮೊದಲು ಶುಲ್ಕ ಪಾವತಿಸಿ ಹೆಸರು ನೋಂದಾಯಿಸದೇ ಇರುವ ವಿದ್ಯಾರ್ಥಿಗಳಿಗೆ 2019–20ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ.

ವಿದೇಶಗಳಲ್ಲಿನ ಸಿಬಿಎಸ್‌ಇ ಶಾಲೆಗಳಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿರುವ ವಿದ್ಯಾರ್ಥಿಗಳು, 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಐದು ವಿಷಯಗಳಿಗೆ ₹ 10,000 ಪಾವತಿಸಬೇಕು. ಈ ಮೊದಲು ಈ ಶುಲ್ಕ ₹ 5,000 ಇತ್ತು. ಈ ವಿದ್ಯಾರ್ಥಿಗಳಿಗೆ ಪ್ರತಿ ಹೆಚ್ಚುವರಿ ವಿಷಯಗಳಿಗೆ ಶುಲ್ಕವನ್ನು ₹ 2,000 ಎಂದು ನಿಗದಿಪಡಿಸಲಾಗಿದೆ. ಈ ಮೊದಲು ಈ ಶುಲ್ಕ ₹ 1,000 ಇತ್ತು.

10 ಮತ್ತು 12ನೇ ತರಗತಿಪರೀಕ್ಷಾ ಶುಲ್ಕ

ವಿವರ; ಹಾಲಿ ಶುಲ್ಕ; ಪರಿಷ್ಕೃತ ಶುಲ್ಕ

ಪರಿಶಿಷ್ಟರು; ₹ 50; ₹1,200

ಸಾಮಾನ್ಯ ವರ್ಗ; ₹ 750; ₹1,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.