ADVERTISEMENT

ಕಾಮರ್ಸ್ ಪದವೀಧರರ ಔದ್ಯೋಗಿಕ ಯಾನ

ಎಚ್‌.ಆರ್ ಪ್ರಭಾಕರ್
Published 12 ಮಾರ್ಚ್ 2019, 19:30 IST
Last Updated 12 ಮಾರ್ಚ್ 2019, 19:30 IST
Lawyer business women consultant reading and writing on a note in office. Law, legal services, advice, consult, Justice concep
Lawyer business women consultant reading and writing on a note in office. Law, legal services, advice, consult, Justice concep   

ಇತ್ತೀಚಿನ ವರ್ಷಗಳಲ್ಲಿ ಭಾರತದ ವಿತ್ತೀಯ ಕ್ಷೇತ್ರದಲ್ಲಾದ ಹಲವು ಬದಲಾವಣೆಗಳು ಆರ್ಥಿಕ ಕ್ಷೇತ್ರದ ಬಹುದೊಡ್ಡ ಕ್ರಾಂತಿಯೆಂದೂ ಮತ್ತು ಭಾರತದ ಆರ್ಥಿಕತೆಯ ಮೇಲೆ ಇದು ಬೀರಿದ ಪರಿಣಾಮ ಹೆಚ್ಚೆಂದೂ ಹಣಕಾಸು ಕ್ಷೇತ್ರದ ದಿಗ್ಗಜರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಈ ಬದಲಾವಣೆಗಳು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ವಿಚಾರವನ್ನು ಅವಲೋಕಿಸಿದರೆ ಉದ್ಯೋಗ, ಸ್ವಯಂ ಉದ್ಯೋಗದತ್ತ ದಾಪುಗಾಲು ಇಡಲು ಹಲವಾರು ಅವಕಾಶಗಳಿವೆ ಎನ್ನುವುದನ್ನು ನಾವಿಲ್ಲಿ ಗಮನಿಸಬಹುದು.

ಯಾವ ಅವಕಾಶಗಳು ಎನ್ನುವ ಪ್ರಶ್ನೆಯನ್ನು ಕೇಳಿಕೊಂಡರೆ, ಭಾರತದಲ್ಲಿ ಜಾರಿಯಾದ ಸರಕು ಮತ್ತು ಸೇವಾ ತೆರಿಗೆ, ನಗದು ರಹಿತ ವ್ಯವಹಾರಕ್ಕೆ ಭಾರತ ಸರ್ಕಾರ ಪ್ರೋತ್ಸಾಹಿಸುತ್ತಿರುವ ಬೆನ್ನಲ್ಲೇ ವಾಣಿಜ್ಯ ಕ್ಷೇತ್ರದ ಪದವೀಧರರಿಗೆ ಭರಪೂರ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎನ್ನುವುದು ಕೂಡ ಗಣನೀಯ ಅಂಶ ಎಂಬ ಉತ್ತರ ದೊರಕುತ್ತದೆ.

ಮೊದಲೆಲ್ಲ ತಾವು ಕಾಮರ್ಸ್ ಪದವಿ ಓದಿದರೆ ಲೆಕ್ಕಪರಿಶೋಧಕರಾಗಲು ಸಿ.ಎ, ಕಂಪನಿ ಸೆಕ್ರೆಟರಿ ಆಗಲು ಸಿಎಸ್ ಮತ್ತು ಉಪನ್ಯಾಸಕರಾಗಲು ಬಯಸುವವರು ಎಂ.ಕಾಂ ಎನ್ನುವ ಸಾಂಪ್ರದಾಯಿಕ ವೃತ್ತಿಪರ ಕೋರ್ಸ್ ಆಯ್ದುಕೊಳ್ಳುತ್ತಿದ್ದುದನ್ನು ನಾವು ಗಮನಿಸಿದ್ದೇವೆ. ಆದರೆ ಮುಂದೆ ಅನುಕೂಲವೇ ಇಲ್ಲ, ತಕ್ಷಣಕ್ಕೆ ದುಡಿಯುವ ಅನಿವಾರ್ಯತೆ ಇದೆ ಎನ್ನುವವರು ಇದರ ಹೊರತಾಗಿಯೂ ತಮ್ಮ ವೃತ್ತಿಬದುಕಿಗೆ ಬುನಾದಿ ಹಾಕಿಕೊಳ್ಳಲು ಒಂದಷ್ಟು ಅವಕಾಶಗಳಿವೆ.

ADVERTISEMENT

ಉದಾಹರಣೆಗೆ ನೀವು ಲೆಕ್ಕ ಪರಿಶೋಧಕರಾಗಬೇಕೆಂದರೆ ಸಿ.ಎ ಪರೀಕ್ಷೆ ಪಾಸು ಮಾಡುವುದರ ಜೊತೆಗೆ 3 ವರ್ಷಗಳ ಕಾಲ ಲೆಕ್ಕ ಪರಿಶೋಧಕರ ಬಳಿ ಆರ್ಟಿಕಲ್‌ಶಿಪ್ ಮಾಡುತ್ತಾ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು, ಕಂಪನಿ ಸೆಕ್ರೆಟರಿಗೂ ಇದು ಅನ್ವಯವಾಗುತ್ತದೆ.

ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಎರಡು ವರ್ಷ ಅವಧಿ, ಒಟ್ಟಾರೆ ಕನಿಷ್ಠ 2 ರಿಂದ 4 ವರ್ಷ ಸಮಯ ಮೀಸಲಿಟ್ಟರೆ ಕೈಗೆಟಕುವಷ್ಟು ಖರ್ಚಿನಲ್ಲಿ ವೃತ್ತಿಪರ ಕೋರ್ಸ್ ಮಾಡಿಕೊಂಡು ನಂತರ ಆಯಾ ಕ್ಷೇತ್ರದಲ್ಲಿ ವೃತ್ತಿಪರರಾಗಿ ತೊಡಗಿಸಿಕೊಳ್ಳುವುದು ಒಂದು ವಿಧಾನ. ತಕ್ಕ ಬದ್ಧತೆ, ತಾಳ್ಮೆ, ಅಗತ್ಯ ಪರಿಶ್ರಮ, ಕಂಪ್ಯೂಟರ್ ಜ್ಞಾನವೂ ಈ ಕೋರ್ಸುಗಳಿಗೆ ಅತ್ಯವಶ್ಯ.

ಇದನ್ನು ಹೊರತುಪಡಿಸಿದರೆ ತಕ್ಷಣಕ್ಕೆ ನೀವು ದುಡಿಮೆ ಮಾಡಿ, ಆರ್ಥಿಕ ಚೈತನ್ಯ ಗಳಿಸಬೇಕೆಂದರೆ ಇಲ್ಲಿವೆ ಕೆಲವು ಅವಕಾಶಗಳು:

* ಯಾವುದಾದರು ವೃತ್ತಿಪರ ಲೆಕ್ಕ ಪರಿಶೋಧಕರ ಬಳಿ ಅಕೌಂಟ್ಸ್ ಕಲಿಯಲು ಸೇರಬಹುದು.

* ತೆರಿಗೆ ಸಲಹೆಗಾರರ ಬಳಿ ಉದ್ಯೋಗವನ್ನು ಗಿಟ್ಟಿಸಬಹುದು.

* ಮೂಲತಃ ಅಕೌಂಟ್ಸ್ ಓದಿರುವುದರಿಂದ ಕಡಿಮೆ ಅವಧಿಯಲ್ಲಿ ಜ್ಞಾನ ಪಡೆದುಕೊಳ್ಳಬಹುದು.

* ಆದಾಯ ತೆರಿಗೆ ಇಲಾಖೆ ಮೂಲಕ ಕಾಮರ್ಸ್ ಪದವಿಧರರು ಟ್ಯಾಕ್ಸ್ ರಿಟರ್ನ್ ಪ್ರಿಪೇರರ್ ಆಗಬಹುದು.

* ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಜಿಎಸ್‌ಟಿಪಿಯಾಗಿ ನೋಂದಣಿ ಮಾಡಿಕೊಂಡು ತಮ್ಮದೇ ವೃತ್ತಿ ಆರಂಭಿಸಬಹುದು.

* ಜಿಎಸ್‌ಟಿ ಕುರಿತ ಕೆಲಸ ಭರಪೂರವಿದ್ದು ಮಾಸಿಕ, ತ್ರೈಮಾಸಿಕ ವಿವರಗಳನ್ನು ಸಲ್ಲಿಸುವ ಕೆಲಸ ಗಿಟ್ಟಿಸಬಹುದು.

* ಪಿಎಫ್, ಇಎಸ್ಐ ಕ್ಷೇತ್ರದಲ್ಲೂ ಸ್ವಯಂ ಉದ್ಯೋಗ ಕಂಡುಕೊಳ್ಳಬಹುದು

* ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿಪರೀಕ್ಷೆ ಬರೆಯಲು ಅರ್ಹತೆ.

* ಯಾವುದೇ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಗಿಟ್ಟಿಸಬಹುದು.

* ವಿದೇಶಗಳಲ್ಲಿ ಭಾರತೀಯ ಕಾಮರ್ಸ್ ಪದವೀಧರರಿಗೆ ವಿಪುಲ ಅವಕಾಶಗಳಿವೆ.

* ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೈವಿಧ್ಯಮಯ ಅವಕಾಶ.

* ಉನ್ನತ ಶಿಕ್ಷಣ ಮಾಡ ಬಯಸುವವರು ಆರ್ಥಿಕ ಸ್ವಾವಲಂಬನೆಗಾಗಿ ಅಕೌಂಟ್ಸ್ ಕ್ಷೇತ್ರದಲ್ಲಿ ಪಾರ್ಟ್‌ಟೈಮ್ ಕೆಲಸವನ್ನೂ ಮಾಡಬಹುದು.

* ವಿಮಾ ಕ್ಷೇತ್ರದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲು ಅವಕಾಶ.

* ಪದವಿ ಅರ್ಹತೆ ಬಯಸುವ ಯಾವುದೇ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು.

* ಮಾರ್ಕೆಟಿಂಗ್ ಕ್ಷೇತ್ರಕ್ಕೆ ಪ್ರವೇಶ ಪಡೆಯಬಹುದು.

* ಮನೆಯಲ್ಲಿ ಕುಳಿತು ಆನ್‌ಲೈನಿನಲ್ಲಿ ಅಕೌಂಟ್ಸ್ ಕೆಲಸ ಮಾಡಲೂ ಅವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.