ADVERTISEMENT

ಎಸ್ಸೆಸ್ಸೆಲ್ಸಿ ದಿಕ್ಸೂಚಿ | ಗುಣಗಳ ಆನುವಂಶೀಯತೆಯ ನಿಯಮಗಳು: ಮೆಂಡೆಲ್‌ ಕೊಡುಗೆ

ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 2:47 IST
Last Updated 11 ಫೆಬ್ರುವರಿ 2021, 2:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೀವಶಾಸ್ತ್ರ

ಮೆಂಡೆಲ್ ಬಟಾಣಿ ಸಸ್ಯದ ಹಲವು ವಿಭಿನ್ನ ಗೋಚರ ಗುಣಗಳನ್ನು ಬಳಸಿಕೊಂಡರು.

ದುಂಡನೆಯ/ ಸುಕ್ಕುಗಟ್ಟಿದ ಬೀಜಗಳು

ADVERTISEMENT

ಎತ್ತರದ/ ಕುಬ್ಜ ಸಸ್ಯಗಳು

ಬಿಳಿ/ ನೇರಳೆ ಹೂವುಗಳು ಇತ್ಯಾದಿ

ಹೀಗೆ, ಅವರು ವಿವಿಧ ಹೂವುಗಳನ್ನು ಹೊಂದಿರುವ ಬಟಾಣಿ ಸಸ್ಯಗಳನ್ನು ತೆಗೆದುಕೊಂಡರು.

ಅ) ಒಂದು ಗುಣವನ್ನು ಆಧರಿಸಿ

ಎತ್ತರದ ಸಸ್ಯ ಮತ್ತು ಒಂದು ಕುಬ್ಜ ಸಸ್ಯಗಳನ್ನು ತೆಗೆದುಕೊಂಡು ಅವುಗಳಿಂದ ಸಂತತಿಯನ್ನು ಉತ್ಪಾದಿಸಿದರು ಮತ್ತು ಎತ್ತರದ ಅಥವಾ ಕುಬ್ಜ ಸಂತತಿಯನ್ನು ಶೇಕಡಾವಾರು ಲೆಕ್ಕ ಹಾಕಿದರು.

ಮೊದಲನೆಯದಾಗಿ, ಈ ಮೊದಲ ಪೀಳಿಗೆಯಲ್ಲಿ (F1 ಸಂತತಿಯಲ್ಲಿ) ಎಲ್ಲಾ ಸಸ್ಯಗಳು ಎತ್ತರವಾಗಿದ್ದವು. ಇದರರ್ಥ ಪೋಷಕ ಸಸ್ಯದ ಗುಣಗಳಲ್ಲಿ ಒಂದು ಮಾತ್ರ ಕಂಡು ಬಂದಿತು. ಎರಡರ ಮಿಶ್ರಣ ಅಲ್ಲ. ನಂತರ F1 ಪೀಳಿಗೆಯ ಎತ್ತರದ ಸಸ್ಯಗಳ ಸ್ಪಕೀಯ ಪರಾಗಸ್ಪರ್ಶದಿಂದ ಸಂತಾನೋತ್ಪತ್ತಿಯಾದ ಸಸ್ಯಗಳು F2 ಪೀಳಿಗೆಯ ಸಸ್ಯಗಳಾಗಿದ್ದು, ಎಲ್ಲಾ ಸಸ್ಯಗಳು ಎತ್ತರವಾಗಿರಲಿಲ್ಲ. ಬದಲಾಗಿ ಅವುಗಳಲ್ಲಿ ನಾಲ್ಕನೇ ಒಂದು ಭಾಗ ಕುಬ್ಜವಾಗಿದ್ದವು.

ಇದು ಎತ್ತರ ಮತ್ತು ಕುಬ್ಜ ಗುಣಗಳೆರಡೂ F1 ಸಸ್ಯಗಳಲ್ಲಿ ಆನುವಂಶೀಯವಾಗಿ ಪಡೆಯಲ್ಪಟ್ಟವು ಎಂಬುದನ್ನು ಸೂಚಿಸುತ್ತದೆ. ಆದರೆ, ಕೇವಲ ಎತ್ತರದ ಗುಣ ಮಾತ್ರ ಗೋಚರವಾಯಿತು. ಇದನ್ನು ಆಧರಿಸಿ ಮೆಂಡೆಲ್‌ ಅವರು ಗುಣವೊಂದನ್ನು ನಿಯಂತ್ರಿಸುವ ಅಂಶ (ಜೀನ್)ದ ಎರಡು ಪ್ರತಿಗಳು ಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿಗಳಲ್ಲಿ ಇರುತ್ತವೆ ಎಂದು ತಿಳಿಸಿದರು.

ಹೀಗಾಗಿ, ಗುಣದ ಎರಡು ಪ್ರತಿಗಳನ್ನು ಪ್ರತಿ ಜೀವಿ ಲೈಂಗಿಕ ಪುನರುತ್ಪಾದನೆಯ ಮೂಲಕ ಆನುವಂಶೀಯವಾಗಿ ಪಡೆಯುತ್ತದೆ. ಈ ಎರಡೂ ಒಂದೇ ಆಗಿರಬಹುದು ಅಥವಾ ಪೋಷಕ ಜೀವಿಯನ್ನು ಅವಲಂಬಿಸಿ ವಿಭಿನ್ನವಾಗಿರಬಹುದು. (ಚಿತ್ರ ನೋಡಿ)

ಈ ವಿವರಣೆಯಲ್ಲಿ TT ಮತ್ತು Tt ಎರಡೂ ಎತ್ತರದ ಸಸ್ಯಗಳಾಗಿವೆ. ಆದರೆ tt ಮಾತ್ರ ಕುಬ್ಜ ಸಸ್ಯವಾಗಿದೆ. ಅಂದರೆ, T ನ ಒಂದು ಪ್ರತಿ ಗಿಡವನ್ನು ಎತ್ತರ ಮಾಡಲು ಸಾಕಾಗುತ್ತದೆ. ಆದರೆ, ಸಸ್ಯ ಕುಬ್ಜವಾಗಲು ಎರಡೂ ಪ್ರತಿಗಳು tt ಆಗಿರಬೇಕು. ‘T’ ನಂಥ ಗುಣಗಳು ಪ್ರಬಲ ಗುಣಗಳು (ಡಾಮಿನೆಂಟ್‌ ಟ್ರೇಟ್ಸ್‌) ಎಂದು, ಹಾಗೂ ‘t’ ನಂತೆ ವರ್ತಿಸುವ ಗುಣಗಳನ್ನು ದುರ್ಬಲ ಗುಣಗಳು (ರಿಸೆಸಿವ್‌ ಟ್ರೇಟ್ಸ್‌) ಎಂದು ಕರೆಯುತ್ತಾರೆ.

ಆ) ಎರಡು ಗುಣಗಳನ್ನು ಆಧರಿಸಿ

ದುಂಡು ಹಳದಿ ಬಣ್ಣದ ಬೀಜಗಳುಳ್ಳ ಸಸ್ಯ ಹಾಗೂ ಸುಕ್ಕುಗಟ್ಟಿದ ಹಸಿರು ಬೀಜಗಳ ಸಸ್ಯಗಳಿಂದ ಪಡೆದ ಸಂತತಿಯ ಸಸ್ಯಗಳು ದುಂಡು ಹಳದಿ ಬಣ್ಣದ ಬೀಜಗಳಿರುವ ಸಸ್ಯಗಳೇ ಆಗಿರುತ್ತವೆ. ಆದರೆ ಈ f1 ಪೀಳಿಗೆ ಸಸ್ಯಗಳ ಸ್ಪಕೀಯ ಪರಾಗ ಸ್ಪರ್ಶದಿಂದ f2 ಸಂತತಿ ಪೀಳಿಗೆಯ ದುಂಡಾದ ಹಳದಿ ಬಣ್ಣದ ಬೀಜಗಳಿರುವ ಕೆಲವು ಸಸ್ಯಗಳು ಮತ್ತು ಸುಕ್ಕಾದ ಹಸಿರು ಬಣ್ಣದ ಬೀಜಗಳಿರುವ ಕೆಲವು ಸಸ್ಯಗಳು ಕಂಡು ಬರುತ್ತವೆ. ಆದರೂ, f2 ಸಂತತಿಯ ಪೀಳಿಗೆಯ ಕೆಲವು ಸಸ್ಯಗಳು ಹೊಸ ಸಂಯೋಜನೆಗಳಿಂದ ಸಹ ಕೂಡಿರುತ್ತವೆ.

ಒಂದಷ್ಟು ಸಸ್ಯಗಳು ಸುಕ್ಕಾದ ಹಳದಿ ಬಣ್ಣದ ಬೀಜಗಳು ಹಾಗೂ ದುಂಡಾದ ಹಸಿರು ಬಣ್ಣದ ಬೀಜಗಳನ್ನು ಹೊಂದಿರುತ್ತವೆ.

ಬೀಜದ ಆಕಾರ ಮತ್ತು ಬೀಜದ ಬಣ್ಣ ನಿಯಂತ್ರಿಸುವ ಅಂಶಗಳು f2 ಪೀಳಿಗೆಯಲ್ಲಿ ಪುನರ್ ಸಂಯೋಗ ಹೊಂದಿ ಯುಗ್ಮಜಗಳಾಗುವ ಮೂಲಕ f2 ಪೀಳಿಗೆಯಲ್ಲಿ ಹೊಸ ಸಂಯೋಜನೆಗಳನ್ನು ಉಂಟು ಮಾಡುವ ಪ್ರಕ್ರಿಯೆಯನ್ನು ನೀವು ಚಿತ್ರದಲ್ಲಿ ಕಾಣಬಹುದು. ಹೀಗಾಗಿ ದುಂಡಾದ ಅಥವಾ ಸುಕ್ಕಾದ ಬೀಜದ ಗುಣಗಳು ಮತ್ತು ಹಳದಿ ಅಥವಾ ಹಸಿರು ಬಣ್ಣದ ಗುಣಗಳು ಸ್ವತಂತ್ರವಾಗಿ ಆನುವಂಶೀಯವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.