ADVERTISEMENT

ವಿಶೇಷಗಳ ಸಂಗಮ ಆದರ್ಶ ವಿದ್ಯಾಲಯ..!

ಶಿಕ್ಷಕರಿಂದ ಶಾಲಾ ಮಕ್ಕಳ ದತ್ತು ಪಡೆಯುವಿಕೆ; ಫಲಿತಾಂಶ ಸುಧಾರಣೆಗೆ ನಿಗಾ ವಹಿಸುವಿಕೆ

ಪ್ರಕಾಶ ಎನ್.ಮಸಬಿನಾಳ
Published 1 ಡಿಸೆಂಬರ್ 2018, 10:05 IST
Last Updated 1 ಡಿಸೆಂಬರ್ 2018, 10:05 IST
ಬಸವನಬಾಗೇವಾಡಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು
ಬಸವನಬಾಗೇವಾಡಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು   

ಬಸವನಬಾಗೇವಾಡಿ:ತಾಲ್ಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯ ಹಲವು ವಿಶೇಷತೆಗಳನ್ನು ಹೊಂದಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ನೀಡಲು, ಸರ್ಕಾರ ಈ ಹಿಂದೆ ತಾಲ್ಲೂಕಿಗೆ ಒಂದರಂತೆ ಈ ಶಾಲೆಗಳನ್ನು ಆರಂಭಿಸಿದ್ದು, ಸುಸಜ್ಜಿತ ಕಟ್ಟಡದಲ್ಲಿ ಇಲ್ಲಿನ ಶಾಲೆ ವ್ಯವಸ್ಥಿತವಾಗಿ ನಡೆದಿದೆ.

6ನೇ ತರಗತಿಯಿಂದ 10ನೇ ತರಗತಿವರೆಗಿರುವ ಈ ಶಾಲೆಯಲ್ಲಿ 368 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿ ತರಗತಿಗೆ 40 ವಿದ್ಯಾರ್ಥಿಗಳಂತೆ ಒಟ್ಟು 10 ವಿಭಾಗಗಳಿವೆ. 13 ಶಿಕ್ಷಕರು ಇತರೆ ಸಿಬ್ಬಂದಿ ಸೇರಿ, 17 ಜನ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನದ ಜತೆಯಲ್ಲೇ; ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಈ ವಿದ್ಯಾಲಯದ ಶಿಕ್ಷಕ ವೃಂದ ಯಶಸ್ವಿ ಪಥದಲ್ಲಿ ಸಾಗಿದೆ.

ADVERTISEMENT

ಪ್ರೊಜೆಕ್ಟರ್ ಮೂಲಕ ಪಾಠ ಬೋಧನೆ

ವಿವಿಧ ವಿಷಯಗಳ ಕುರಿತು ಪ್ರೊಜೆಕ್ಟರ್ ಮೂಲಕ ಪಾಠ ಬೋಧನೆ ನಡೆದಿದೆ. ಶಿಕ್ಷಕರು ಶಾಲೆ ಆರಂಭದ ಮುಂಚೆ ಹಾಗೂ ಶಾಲೆ ಬಿಟ್ಟ ನಂತರ, ಹಲವು ಗಂಟೆ ಶಾಲೆಯ ಕೆಲಸ ಸೇರಿದಂತೆ, ನಾಳಿನ ಪಾಠ ಬೋಧನೆಗೆ ಅಗತ್ಯ ತಯಾರಿ ಮಾಡಿಕೊಳ್ಳುವುದು ಇಲ್ಲಿನ ವಿಶೇಷ. ಹಾಜರಾತಿ ನೂರಕ್ಕೆ ನೂರು.

ಸುಸಜ್ಜಿತ ಶಾಲಾ ಕಟ್ಟಡದಲ್ಲಿ ವಿಶಾಲವಾದ ಬೋಧನಾ ಕೊಠಡಿ, ಪ್ರಯೋಗಾಲಯ, ಅಧ್ಯಯನ ಕೊಠಡಿ, ವಿಷಯವಾರು ಸಂಘದ ಕೋಣೆ ಸೇರಿದಂತೆ ಆಟದ ಮೈದಾನವಿದೆ.

‘ವಿಷಯವಾರು ಸಂಘದ ಕೊಠಡಿಯಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳೇ ತಯಾರಿಸಿದ ಮಾದರಿಗಳ ಪ್ರದರ್ಶನ ಹಾಗೂ ಕ್ರಿಯಾತ್ಮಕ ರಚನೆಗಳ ತಯಾರಿ, ವಿಷಯಾಧಾರಿತ ಚಟುವಟಿಕೆಗಳನ್ನು ಮಕ್ಕಳಿಂದಲೇ ಮಾಡಿಸಲಾಗುತ್ತಿದೆ’ ಎನ್ನುತ್ತಾರೆ ಶಿಕ್ಷಕರಾದ ಆರ್.ಐ.ಕಂಬಾರ, ದೀಪದ ದನದಮನಿ.

‘ಶಿಕ್ಷಕ ಸಿ.ಎಂ.ವಾಡೇಕರ ನೇತೃತ್ವದಲ್ಲಿ ಶಿಕ್ಷಕರೇ ಗ್ರಂಥಾಲಯ ನಿರ್ವಹಣೆ ಮಾಡುತ್ತಿದ್ದಾರೆ. ವಿಷಯಾಧಾರಿತ ಹಾಗೂ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 4000ಕ್ಕೂ ಹೆಚ್ಚು ಪುಸ್ತಕಗಳು ಹಾಗೂ 400 ಸಿ.ಡಿ.ಗಳ ಸಂಗ್ರಹ ಇಲ್ಲಿದೆ’ ಎಂದು ಶಿಕ್ಷಕರಾದ ಪ್ರಸನ್ನ ಹೆಗಡೆ, ಪರಮೇಶ್ವರ ಆಚಾರಿ ತಿಳಿಸಿದರು.

ಹಲವು ಕಾರ್ಯ ಚಟುವಟಿಕೆ

ಮಕ್ಕಳಲ್ಲಿನ ಕೌಶಲ ಅರಿಯುವುದಕ್ಕಾಗಿ ವಿಷಯಾಧಾರಿತ ವಿವಿಧ ಮಾದರಿಗಳ ರಚನೆ, ಕಸದಿಂದ ರಸ ಮಾದರಿ ರಚನೆ, ವಸ್ತು ಪ್ರದರ್ಶನ, ಕ್ಲೇ ಮಾಡೆಲಿಂಗ್, ರಸಪ್ರಶ್ನೆ, ವಚನ ಸಂಗ್ರಹ ಸ್ಪರ್ಧೆ, ಗುಂಪು ಚರ್ಚೆ, ಭಾಷಣ, ಜಾನಪದ ಗೀತೋತ್ಸವ ನಿರಂತರವಾಗಿ ನಡೆಯುತ್ತವೆ.

ಇವುಗಳ ಜತೆಯಲ್ಲೇ ಆಹಾರ ಮೇಳ, ವಿಜ್ಞಾನ, ಗಣಿತ ವಿಷಯಾಧಾರಿತ ರಂಗೋಲಿ ಸ್ಪರ್ಧೆ, ಇಂಗ್ಲಿಷ್‌ ಭಾಷಾ ವಿಷಯಾಧಾರಿತ ಆಶು ಭಾಷಣ, ಕಥಾಭಿನಯ, ಚಿತ್ರ ನೋಡಿ ಕಥೆ ಹೇಳುವುದು, ಸ್ಪೆಲಿಂಗ್ ಬಿ ಸ್ಪರ್ಧೆ, ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿತೆ ಮಾಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳು ವರ್ಷವಿಡಿ ವಿದ್ಯಾಲಯದಲ್ಲಿ ನಡೆಯುತ್ತವೆ.

ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ಭಾಗಿಯಾಗುತ್ತಾರೆ. ಇನಸ್ಪೈರ್‌ ಅವಾರ್ಡ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಕೀರ್ತಿ ಈ ಶಾಲೆಯ ವಿದ್ಯಾರ್ಥಿಗಳದ್ದು.

ನಸುಕಿನ ನಾಲ್ಕಕ್ಕೆ ಮೊಬೈಲ್‌ ಕರೆ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬಸವನಬಾಗೇವಾಡಿ ತಾಲ್ಲೂಕಿಗೆ ಪ್ರಥಮ ಸ್ಥಾನ ಈ ಶಾಲಾ ವಿದ್ಯಾರ್ಥಿಗಳದ್ದು. 2015-16ನೇ ಸಾಲಿನ ಪರೀಕ್ಷೆಯಲ್ಲಿ ಅಪೇಕ್ಷಾ ಉಕ್ಕಲಿ 625ಕ್ಕೆ 620 ಅಂಕ ಪಡೆದು ಶೇ 99ರಷ್ಟು ಫಲಿತಾಂಶ ಪಡೆಯುವ ಮೂಲಕ ಶಾಲೆಯ ಹೆಗ್ಗಳಿಕೆ ಹೆಚ್ಚಿಸಿದ್ದಾರೆ.

ಈ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ.ಸಿ ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ವಿಶೇಷ ಗಮನ ಹರಿಸುತ್ತಿದ್ದಾರೆ. ಜೂನ್‌ನಿಂದಲೇ ವಿಷಯವಾರು ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಕರು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು, ಆಪ್ತ ಸಮಾಲೋಚನೆ ಮೂಲಕ ಮಕ್ಕಳಿಗೆ ವೈಯಕ್ತಿಕ ಕಾಳಜಿ ವಹಿಸಲಾಗುತ್ತಿದೆ.

ಶಿಕ್ಷಕರು ನಿರಂತರವಾಗಿ ಮಕ್ಕಳ, ಪಾಲಕರೊಂದಿಗೆ ಸಂಪರ್ಕ ಹೊಂದಿ ಫಲಿತಾಂಶ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ. ಶಾಲೆಯ ಮಧ್ಯಂತರ ರಜೆಯ ನಂತರ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಪ್ರತಿ ದಿನ ನಸುಕಿನ ನಾಲ್ಕಕ್ಕೆ ಮೊಬೈಲ್ ಕರೆ ಮಾಡಿ, ವಿದ್ಯಾರ್ಥಿಯನ್ನು ಎಚ್ಚರಿಸಿ ಓದುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದು; ಇದಕ್ಕೆ ಪಾಲಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.