ADVERTISEMENT

ಹಾಜರಿ ಪುಸ್ತಕಕ್ಕೆ ಬೆಂಕಿ!

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:30 IST
Last Updated 5 ಫೆಬ್ರುವರಿ 2019, 19:30 IST
Atendence
Atendence   

ಚುಮು ಚುಮು ಚಳಿಯಲ್ಲಿ ತುಂತುರು ಹನಿಗಳೊಂದಿಗೆ ಗೆಳತಿಯೊಂದಿಗೆ ಕಾಲೇಜಿಗೆ ಹೆಜ್ಜೆ ಹಾಕಿದೆ. ನಾವು ಹೋಗುವ ಮೊದಲೇ ತರಗತಿಯಲ್ಲಿಶಿಕ್ಷಕರು ಹಾಜರಾಗಿದ್ದರು.

ನನ್ನ ಪ್ರೀತಿಯ ಗೆಳತಿ ಲಕ್ಷ್ಮಿ ಒಂದು ವಾರಗಳ ಕಾಲ ಕಾಲೇಜಿಗೆ ಚಕ್ಕರ್ ಹಾಕಿದ್ದಳು. ಅವಳನ್ನು ಕಂಡೊಡನೆ ಕೆಂಡಾಮಂಡಲವಾದ ಶಿಕ್ಷಕರು ‘ಒಳಗೆ ಬರಬೇಡ, ಇಷ್ಟ ಬಂದಾಗ ಬರೋಕೆ ಇದೇನು ಮಾವನ ಮನೇನಾ? ಹೋಗಾಚೆ’ ಎಂದು ಬೈದರು. ಕಣ್ಣು ತುಂಬಿಕೊಂಡ ಗೆಳತಿ ಹಿಂದಕ್ಕೆ ಸರಿದಳು.

ಗೆಳತಿಯನ್ನು ಬಿಟ್ಟು ಹೋಗಲು ಇಷ್ಟವಿಲ್ಲ, ಜೊತೆಗೆ ಹೋಗಲೂ ಧೈರ್ಯವಿರದೆ ತರಗತಿಯೊಳಗೆ ಹೋಗಿ ಕುಳಿತೆ. ತರಗತಿ ಮುಗಿಸಿ ಹೊರಗಡೆ ಬಂದು ಕಾರಿಡಾರ್‌ನಲ್ಲಿ ಕುಳಿತಿದ್ದ ಗೆಳತಿಯ ಬಳಿ ಹೋದೆ. ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ‘ಸರ್ ಬಾಯಿಗೆ ಬಂದಂತೆ ಬೈದ್ರು. ನಾಳೆ ನಿಮ್ಮಪ್ಪನ್ನ ಕರ್ಕೊಂಡು ಬಾ ಇಲ್ಲದಿದ್ದರೆ ಕ್ಲಾಸ್‌ಗೆ ಬರ್ಬೇಡ, ಅಟೆಂಡೆನ್ಸ್ ಇಲ್ಲ ನಿನ್ನ ಎಕ್ಸಾಂಗೆ ಕೂರ್ಸಲ್ಲ ಅಂದ್ರು. ನಮ್ಮಪ್ಪ ಕಾಲೇಜಿಗೆ ಹೋಗಿಲ್ಲ ಅಂದ್ರೆ ಹೂತಾಕ್ತಿನಿ ಅಂತಿದಾರೆ. ನಾನ್ ಏನ್ ಮಾಡ್ಲಿ ಹೇಳು‘ ಎನ್ನುತ್ತಾ ಅಳುತ್ತಲೇ ಹೋದಳು.

ADVERTISEMENT

ಮರುದಿನ ಅವಳ ಮನೆಗೆ ಹೋದಾಗ ‘ನಡಿ ಹೋಗೋಣ’ ಎಂದಳು. ಒಂದೆರಡು ಹೆಜ್ಜೆ ಮುಂದೆ ಹೋದಂತೆ ಕಾಲೇಜಿನ ಹಾದಿಯಿಂದ ಬೇರೆ ದಾರಿಗೆ ನಡೆಸಿದಳು. ‘ನಾನು ಒಂದು ವಾರ ಕಾಲೇಜಿಗೆ ಬಂದಿಲ್ಲ ಎಂದರೆ ನಮ್ಮಪ್ಪ ನನ್ನನ್ನ ಸಾಯಿಸ್ತಾರೆ. ಆ ಕೆ.ಡಿ. ಸರ್ ಒಳಗೇ ಸೇರ್ಸಲ್ಲ ಅಂತಾರೆ’ ಎಂದು ಬೇಕರಿಗೆ ಹೋಗಿ ಕೇಕು, ಚಕ್ಕುಲಿ, ಬಿಸ್ಕೆಟ್ ತೆಗೆದುಕೊಂಡಳು. ನಮ್ಮೂರಿನ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋದಳು. ಮೊದಲು ದೇವರಿಗೆ ನಮಸ್ಕಾರ ಮಾಡಿ ಒಳಗಿನ ಆವರಣದಲ್ಲಿದ್ದ ಬಾವಿಯ ಹಿಂದೆ ಹೋಗಿ ಕುಳಿತುಕೊಂಡೆವು. ನಾನು ಒಳಗೊಳಗೇ ಬೆವರುತ್ತಿದ್ದೆ, ಇವಳೇನಾದರೂ ಬಾವಿಗೆ ಬೀಳುವ ಯೋಚನೆಯಲ್ಲಿದ್ದಾಳಾ? ಎಂದು.

‘ನೋಡು ಮನೆಯವರು ನಾವು ಕಾಲೇಜಿಗೆ ಹೋಗಿದ್ದೇವೆ ಎಂದುಕೊಳ್ಳಲಿ. ಹೊರಗಡೆ ಇದ್ದರೆ ಯಾರಾದರೂ ನೋಡುತ್ತಾರೆ. ಇಲ್ಲಿದ್ದರೆ ಯಾರಿಗೂ ಗೊತ್ತಾಗುವುದಿಲ್ಲ’ ಎಂದಳು. ನಂತರ ದೇವಸ್ಥಾನದ ಎದುರಿಗಿದ್ದ ಪಾರ್ಕಿನಲ್ಲಿ ಕುಳಿತು ಕೇಕು, ಚಕ್ಕುಲಿ ತಿಂದೆವು. ಕಾಲೇಜು ಮುಗಿಯುವ ಸಮಯ ಆಯಿತು. ಮನೆಕಡೆ ನಡೆದವು.

ಮತ್ತೆ ಮರುದಿನವೂ ನನ್ನ ಗೆಳತಿ ದೇವರ ದರ್ಶನವನ್ನೇ ಮಾಡಿಸಿದಳು. ಹೀಗೆ 3-4 ದಿನ ಕಳೆಯಿತು.

ಗ್ರಹಚಾರಕ್ಕೆ ನನ್ನ ತಂದೆಗೆ ನಮ್ಮ ಶಿಕ್ಷಕರು ದಾರಿಯಲ್ಲಿ ಸಿಕ್ಕಿ ‘ನಿಮ್ಮ ಮಗಳು ಕಾಲೇಜಿಗೆ ಬಂರುತ್ತಿಲ್ಲವಲ್ಲ ಏಕೆ ಹುಷಾರಿಲ್ವಾ?’ ಎಂದು ಕೇಳಿಬಿಟ್ಟಿದ್ದಾರೆ.ಅಪ್ಪನಿಗೆ ಶಿಕ್ಷಕರು ಹೇಳಿದ ಮಾತು ಅಚ್ಚರಿ ತಂದು ಮನೆಗೆ ಬಂದವರೇ ನನ್ನ ಎಗ್ಗಾಮುಗ್ಗಾ ಬಡಿದು ಬಾಯಿಬಿಡಿಸಿದರು. ಲಕ್ಷ್ಮೀ ಮನೆಗೆ ಕರೆದೊಯ್ದು ಅವಳ ತಂದೆಗೂ ತಿಳಿಸಿ ನಮ್ಮಿಬ್ಬರನ್ನು ಕಾಲೇಜಿಗೆ ಎಳೆದೊಯ್ದರು. ಕಾಲೇಜಿನಲ್ಲಿ ಎಲ್ಲರ ಮುಂದೆ ನಮ್ಮ ಗುಣಗಾನ, ಮಂಗಳಾರತಿ. ಎಲ್ಲಾ ಮುಗಿದು ಕೊನೆಗೆ ನಮ್ಮನ್ನ ತರಗತಿಗೆ ಸೇರಿಸಿಕೊಂಡರು.

ನಮ್ಮ ಸರ್‌ ‘ಅಟೆಂಡೆನ್ಸ್ ಇಲ್ಲ. ಎಕ್ಸಾಂಗೆ ಕೂರ್ಸಲ್ಲ’ ಎಂದು ಮತ್ತೆ ಮತ್ತೆ ಹೆದರಿಸುತ್ತಿದ್ದರು. ಅಟೆಂಡೆನ್ಸ್ ಇದ್ದರೆ ತಾನೆ ನೀವು ಕೂರ್ಸೊಲ್ಲಾ ಅನ್ನೋದು ಎಂದು ಮನಸ್ಸಿನಲ್ಲೇ ಅಧ್ಯಾಪಕರಿಗೆ ಸವಾಲು ಎಸೆದಿದ್ದಳು ಗೆಳತಿ.ಒಂದು ದಿನ ಬೆಳಿಗ್ಗೆ 7 ಗಂಟೆಗೇ ಕಾಲೇಜಿಗೆ ತೆರಳಿ ಕಸ ಗುಡಿಸುವ ಆಂಟಿಗೆ ಸಹಾಯ ಮಾಡುವ ನೆಪದಲ್ಲಿ ನಮ್ಮ ತರಗತಿ ಅಟೆಂಡೆನ್ಸ್ ಪುಸ್ತಕ ಎಗರಿಸಿ ಕಸದ ಗುಂಡಿಗೆ ಎಸೆದು ತಾನೇ ಬೆಂಕಿಯನ್ನೂ ಹಚ್ಚಿಬಿಟ್ಟಳು. ಇದನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ, ಮದುವೆಯಾಗಿ ಮೈಸೂರಿನಲ್ಲಿರುವ ಅವಳು ಊರಿಗೆ ಬಂದಾಗೆಲ್ಲಾ ಈ ಘಟನೆಯನ್ನು ಇಬ್ಬರೂ ಜ್ಞಾಪಿಸಿಕೊಳ್ಳುತ್ತೇವೆ.

ಮಂಜುಳ ಸಿ.ಎಸ್., ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.